ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ಸಮುದಾಯ: ಮರು ಸಮೀಕ್ಷೆ ಮಾಡಿ

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹೇಳಿಕೆ
Last Updated 23 ಫೆಬ್ರುವರಿ 2020, 14:14 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಸುಮಾರು 40 ಲಕ್ಷವಿದೆ. ಆದರೆ, ಸರ್ಕಾರದ ಅಂಕಿ ಅಂಶಗಳಲ್ಲಿ ಕಡಿಮೆ ಜನಸಂಖ್ಯೆ ತೋರಿಸಿದ್ದು, ಮರು ಸಮೀಕ್ಷೆಗೆ ಮನವಿ ಮಾಡಲಾಗಿದೆ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಹೇಳಿದರು.

ಜಿಲ್ಲಾ ಬ್ರಾಹ್ಮಣರ ಸಂಘವು ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯದ ಉದ್ದಗಲಕ್ಕೂ ಬ್ರಾಹ್ಮಣ ಸಮುದಾಯವರಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.

‘ಸರ್ಕಾರದ ಲೆಕ್ಕದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆ ಕೇವಲ 17 ಲಕ್ಷವಿದೆ. ಜಾತಿ ಜನಗಣತಿಯಲ್ಲಿ ಬ್ರಾಹ್ಮಣ ಎಂದು ಬರೆಯದೆ ಸಮುದಾಯ ಒಳ ಪಂಗಡಗಳನ್ನು ನಮೂದಿಸಿರುವುದೇ ಇದಕ್ಕೆ ಕಾರಣ. ಹೀಗಾಗಿ ಮರು ಸಮೀಕ್ಷೆ ನಡೆಸಿ ವ್ಯತ್ಯಾಸ ಸರಿಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋರಲಾಗಿದೆ. ಸಮೀಕ್ಷೆ ವೇಳೆ ಸಮುದಾಯದವರು ಬ್ರಾಹ್ಮಣ ಎಂದು ನಮೂದಿಸಬೇಕು’ ಎಂದು ಮನವಿ ಮಾಡಿದರು.

‘ಬಿಜೆಪಿಯಲ್ಲಿ 40 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನನಗಿಂತ ಕಿರಿಯರು ಕೂಡ ಶಾಸಕರಾಗಿ, ಸಂಸದರಾಗಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನನಗೆ ವಿಧಾನಸಭೆ, ವಿಧಾನ ಪರಿಷತ್‌ಗೆ ಅವಕಾಶ ನೀಡುವಂತೆ ಯಡಿಯೂರಪ್ಪ ಅವರನ್ನು ಕೋರಿದ್ದೆ. ಮತ್ತೊಮ್ಮೆ ಅವರನ್ನು ಭೇಟಿಯಾಗಿ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡುವಷ್ಟರಲ್ಲಿ ಮುಖ್ಯಮಂತ್ರಿಗಳು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷನನ್ನಾಗಿ ನೇಮಿಸಿದರು’ ಎಂದು ವಿವರಿಸಿದರು.

ಜಿಲ್ಲೆಗಳಿಗೆ ಭೇಟಿ

‘ಮಂಡಳಿ ಅಧ್ಯಕ್ಷನಾದ ನಂತರ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಸಚಿವರು, ಶಾಸಕರ ಕಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿನ ಬ್ರಾಹ್ಮಣ ಸಮುದಾಯ ಉತ್ತಮ ಸ್ಥಿತಿಯಲ್ಲಿದ್ದರೂ ಗ್ರಾಮೀಣ ಭಾಗದಲ್ಲಿ ನೂರಾರು ಕುಟುಂಬಗಳು ಹಿಂದುಳಿದಿವೆ. ಇವರಿಗಾಗಿ ಕೆಲಸ ನಿರ್ವಹಿಸುವ ಕಾಳಜಿಯಿದೆ’ ಎಂದರು.

‘ಯಡಿಯೂರಪ್ಪ ನೇತೃತ್ವದ ಸರ್ಕಾರ ಹೊಸದಾಗಿ ಮಂಡಳಿ ರಚಿಸಿ ಆರಂಭಿಕ ಅನುದಾನ ₹ 25 ಕೋಟಿ ಮೀಸಲಿಟ್ಟಿದೆ. ಬಜೆಟ್‌ನಲ್ಲಿ ₹ 75 ಕೋಟಿ ಮೀಸಲಿಡುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಹಿಂದುಳಿದಿರುವ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲು ₹ 300 ಕೋಟಿ ಮೀಸಲಿಡುವಂತೆ ಮನವಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅನೇಕ ಯೋಜನೆ

‘ವಿವಿಧ ಜಿಲ್ಲೆಗಳಲ್ಲಿ ಬ್ರಾಹ್ಮಣ ಸಮುದಾಯದ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ. ನಾನಾ ಭಾಗಗಳಲ್ಲಿ ಉತ್ತಮ ಸಲಹೆ ವ್ಯಕ್ತವಾಗುತ್ತಿವೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಸಮುದಾಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗಿದೆ. ಸಮುದಾಯದ ಅಭಿವೃದ್ಧಿಗೆ ಅನೇಕ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

‘ಸಾಂದೀಪನಿ ಶಿಷ್ಯ ವೇತನದಡಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್‌ ನಂತರದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ದೇಶ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಶೈಕ್ಷಣಿಕ ಸಾಲ, ಆಚಾರ್ಯತ್ರಯ ವೇದ ಶಿಷ್ಯವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವವರಿಗೆ ಧನಸಹಾಯ, ಸನ್ನಿಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಕಲ್ಯಾಣ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.

‘ಮಂಡಳಿಯ ಯೋಜನೆಗಳಿಗೆ ಬ್ರಾಹ್ಮಣ ಕುಟುಂಬಗಳ ವಾರ್ಷಿಕ ಆದಾಯ, ವಿದ್ಯಾರ್ಹತೆ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು. ಸಮುದಾಯಕ್ಕೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡಲು ಕೆಲ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಹಾಗೂ ಕೇಂದ್ರ ಸರ್ಕಾರ ಪ್ರಕಟಿಸಿರುವ ಮೇಲ್ವರ್ಗದಲ್ಲಿರುವ ಬಡ ಕುಟುಂಬಗಳಿಗೆ ಶೇ 10ರ ಮೀಸಲಾತಿಯಲ್ಲಿ ಸಮುದಾಯಕ್ಕೆ ಸಿಗಬೇಕಾದ ಪಾಲು ದೊರಕಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯ ನರಸಿಂಹಮೂರ್ತಿ, ನಗರಸಭೆ ಆಯುಕ್ತ ಶ್ರೀಕಾಂತ್, ಸಂಘದ ಪದಾಧಿಕಾರಿಗಳಾದ ಅಚ್ಯುತ, ಚಂದ್ರಪ್ರಕಾಶ್, ಎಂಪಿ.ಆನಂದ್, ರವಿಶಂಕರ್ ಅಯ್ಯರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT