ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಆರ್ಭಟಕ್ಕೆ ಮುದುಡಿದ ಬದುಕು

Last Updated 27 ನವೆಂಬರ್ 2020, 7:34 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಚಂಡಮಾರುತದ ಪರಿಣಾಮವಾಗಿ ಗುರುವಾರ ಬೆಳಿಗ್ಗೆಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೆಚ್ಚಿನ ಬೆಳೆ ಹಾನಿ ಉಂಟಾಗಿದೆ.

ವಿಶೇಷವಾಗಿ ತಾಲ್ಲೂಕಿನ ಉತ್ತರ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿತ್ತು. ಈ ಭಾಗದ ಕೆರೆಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೆಲವು ಕೆರೆಗಳು ತುಂಬಿವೆ. ಮಳೆ ಹಾಗೂ ಬಿರುಗಾಳಿಯ ಹೊಡೆತಕ್ಕೆ ರಾಯಲ್ಪಾಡ್‌, ಮುದಿಮಡಗು ಮತ್ತಿತರ ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಹಾಗೂ ಮರಗಳು ಧರೆಗೆ ಉರುಳಿವೆ.

ರಾಯಲ್ಪಾಡ್‌ ಮುದಿಮಡಗು ರಸ್ತೆಗೆ ಅಡ್ಡಲಾಗಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದ ಪರಿಣಾಮವಾಗಿ ಗಡಿ ರಸ್ತೆಯ ಸಂಚಾರ ಸ್ಥಗಿತಗೊಂಡಿತ್ತು.

ಮಳೆ ಹಾಗೂ ಗಾಳಿ ಹೊಡೆತಕ್ಕೆ ಸಿಕ್ಕಿ ಕೊಳವೆಬಾವಿಗಳ ಆಶ್ರಯದಲ್ಲಿ ಬೆಳೆಯಲಾಗಿರುವ ಭತ್ತದ ಅರಿ ನೆಲಕಚ್ಚಿದೆ. ಕಟಾವು ಮಾಡಿ ಇಡಲಾಗಿದ್ದ ಅರಿ ಹಾಗೂ ಬಡಿದು ರಾಶಿ ಮಾಡಲಾಗಿದ್ದ ಭತ್ತ ನೀರು ಪಾಲಾಗಿದೆ. ತೊಗರಿ, ಮುಸುಕಿನಜೋಳ, ಟೊಮೆಟೊ ಮತ್ತಿತರ ತೋಟದ ಬೆಳೆಗಳು ನೆಲಕಚ್ಚಿವೆ.

ಗ್ರಾಮೀಣ ಪ್ರದೇಶದಲ್ಲಿ ಹಸಿರು ಮೇವು ಕಟಾವಿಗೂ ಮಳೆ ಬಿಡುವು ಕೊಡಲಿಲ್ಲ. ಟೊಮೆಟೊ ಬಿಡಿಸಲು ಸಾಧ್ಯವಾಗಲಿಲ್ಲ. ಕೊಯ್ಲಿಗೆ ಬಂದಿದ್ದ ರಾಗಿ ತೆನೆ ಕಟಾವು ಸಾಧ್ಯವಾಗಲಿಲ್ಲ. ಮಳೆ ಮುಂದುವರಿದರೆ ತೆನೆ ಮೊಳಕೆಯೊಡೆಯುವ ಆತಂಕ ರೈತರನ್ನು ಕಾಡುತ್ತಿದೆ. ರೇಷ್ಮೆ ಕೃಷಿಕರು ಹುಳುಗಳಿಗೆ ಸೊಪ್ಪು ತರಲು ಮಳೆ ಅಡ್ಡಿಯಾಗಿತ್ತು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಚರಂಡಿಗಳು ಮಳೆ ನೀರಿನಿಂದ ತುಂಬಿ ಹರಿದವು.

‘ಇಂಥ ಮಳೆಯನ್ನು ಕಂಡು ಎಷ್ಟೋ ವರ್ಷಗಳಾಗಿದ್ದವು. ಕೆರೆ ಕುಂಟೆಗಳಿಗೆ ನೀರು ಬಂದಿದೆಯಾದರೂ, ಎಲ್ಲಾ ಕಡೆ ಬೆಳೆ ನಷ್ಟ ಉಂಟಾಗಿದೆ. ರಾಗಿ ತೆನೆ ಕಟಾವು ಸಾಧ್ಯವಾಗುತ್ತಿಲ್ಲ’ ಎಂದು ರೈತ ಮಹಿಳೆ ಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT