ಶುಕ್ರವಾರ, ಜನವರಿ 22, 2021
19 °C
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆ

ಬಿಎಸ್‌ವೈ ಸರ್ವ ಸಮ್ಮತಿಯ ನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದಲ್ಲಿ ಸರ್ವ ಸಮ್ಮತಿಯ ನಾಯಕರು. ವಿಧಾನಸಭಾ ಚುನಾವಣೆಗೂ ಮುನ್ನವೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಧಾರ್ಮಿಕವಾಗಿ ಗ್ರಹಣ ಇದೆಯೇ ಹೊರತು ರಾಜಕೀಯವಾಗಿ ಯಾವುದೇ ಗ್ರಹಣವಿಲ್ಲ. ಯಡಿಯೂರಪ್ಪ ಅವರು ನೆರೆ ಮತ್ತು ಬರ, ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿಧಾನಸಭೆ ಉಪ ಚುನಾವಣೆಯಲ್ಲಿ ಜನರು ಯಡಿಯೂರಪ್ಪ ಅವರ ಮೇಲೆ ನಂಬಿಕೆಯಿಟ್ಟು ಪಕ್ಷದ 13 ಮಂದಿಯನ್ನು ಗೆಲ್ಲಿಸಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆ ಮತ್ತು ವಿಧಾನ ಪರಿಷತ್‌ ಚುನಾವಣೆಯಲ್ಲೂ ಜನರು ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಬಿ ಫಾರ್ಮ್‌ ಪಡೆದು ಶಾಸಕರಾದ ಮೇಲೆ ಮೂಲ ಮತ್ತು ವಲಸಿಗರೆಂಬ ಪ್ರಶ್ನೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಾವುದೇ ವ್ಯಕ್ತಿಯ ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಪ್ರಾಣದ ಜತೆ ಚೆಲ್ಲಾಟವಾಡಬಾರದು. ಡಿ.ಕೆ.ಶಿವಕುಮಾರ್‌ ಅವರು ಆತ್ಮಹತ್ಯೆಗೆ ಯತ್ನಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್‌ ಅವರಿಗೆ ಸಾಂತ್ವನ ಹೇಳಬೇಕಿತ್ತು. ಅದು ಬಿಟ್ಟು ಸಿ.ಡಿ ಎಂದು ಹೇಳಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅವರ ಬಳಿ ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

ಚುನಾವಣೆ ಸವಾಲು: ‘ಗ್ರಾ.ಪಂ ಚುನಾವಣೆಯನ್ನು ಪಕ್ಷವು ಸವಾಲಾಗಿದೆ ಸ್ವೀಕರಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಾಗುತ್ತಿದೆ. ದೆಹಲಿಯಿಂದ ಸರ್ಕಾರವೆಂಬ ಭಾವನೆ ಬಿಟ್ಟು ಹಳ್ಳಿಯಿಂದ ಆಡಳಿತ ಎಂಬ ಪರಿಕಲ್ಪನೆಯಡಿ ಚುನಾವಣೆ ಎದುರಿಸಬೇಕು’ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ರಾಜ್ಯದ 6,020 ಗ್ರಾ.ಪಂಗಳಲ್ಲಿ ಚುನಾವಣೆ ನಡೆಯಲಿದ್ದು, 93,500 ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವು 6 ತಂಡ ರಚಿಸಿದ್ದು, 30 ಜಿಲ್ಲೆಗಳಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಪಕ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಗ್ರಾ.ಪಂ ಚುನಾವಣೆಗಾಗಿ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ’ ಎಂದರು.

‘ಕೇಂದ್ರ ಸರ್ಕಾರದ ೧೪ ಮತ್ತು ೧೫ ಹಣಕಾಸು ನಿಧಿಯ ಅನುದಾನ ಸದ್ಬಳಕೆಯಾಗಬೇಕು. ರಾಜ್ಯ ಸರ್ಕಾರ ಕೊಡುವ ಶಾಸನಬದ್ಧ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ವಿವಿಧ ಇಲಾಖೆಗಳ ಅನುದಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಗ್ರಾ.ಪಂಗಳು ಸರ್ಕಾರದಂತೆ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.