ಬುಧವಾರ, ಆಗಸ್ಟ್ 21, 2019
27 °C
ಅಲ್ಲಾಹುನ ನಾಮಪಠಣ: ಮಸೀದಿಯ ಮಿನಾರುಗಳಲ್ಲಿ ಪ್ರಾರ್ಥನೆ ದನಿ

ಜಿಲ್ಲೆಯಲ್ಲಿ ಕಳೆಗಟ್ಟಿದ ಬಕ್ರೀದ್‌ ಸಂಭ್ರಮ

Published:
Updated:
Prajavani

ಕೋಲಾರ: ತ್ಯಾಗ, ಬಲಿದಾನ, ಸೋದರತ್ವದ ಸಂಕೇತ­ವಾದ ಬಕ್ರೀದ್‌ ಹಬ್ಬದ ಆಚರಣೆಯು ಜಿಲ್ಲೆಯಲ್ಲಿ ಸೋಮವಾರ ಕಳೆಗಟ್ಟಿತು. ಮುಸ್ಲಿಮ್‌ ಸಮುದಾಯದವರು ಸಂಭ್ರಮ ಸಡಗರದಿಂದ ಹಬ್ಬ ಆಚರಿಸಿದರು.

ಶ್ವೇತ ವರ್ಣದ ಹೊಸ ಬಟ್ಟೆ ತೊಟ್ಟಿದ್ದ ಮುಸ್ಲಿಂ ಬಾಂಧವರು ಅಲ್ಲಾಹುನ ನಾಮಪಠಣದೊಂದಿಗೆ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಗುರುಗಳ ಪ್ರವಚನದ ಬಳಿಕ ವಯಸ್ಸಿನ ಭೇದವಿಲ್ಲದೆ ಪರಸ್ಪರ ಶುಭಾ­ಶಯ ವಿನಿಮಯ ಮಾಡಿ­ಕೊಂಡರು.

ಪುಟ್ಟ ಮಕ್ಕಳು ಪರಸ್ಪರ ಆಲಂಗಿಸಿ ಶುಭಾಶಯ ಕೋರಿದರು. ಮಹಿಳೆಯರು ಮನೆಗಳಲ್ಲೇ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ಸ್ಮರಿಸಿದರು. ಹಬ್ಬದ ಅಂಗವಾಗಿ ಮಸೀದಿಗಳ ಮಿನಾರುಗಳಲ್ಲಿ ಪ್ರಾರ್ಥನೆಯ ದನಿ ಮೊಳಗಿತು. ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ದರ್ಗಾ ಶಾಹಿ ಮೊಹಲ್ಲಾ ಹಿಂಭಾಗದ ಕುತುಬ್‌ ಗೋರಿ ಮಸೀದಿ, ಅಬುಬಕರ್‌ ಮಸೀದಿ, ಮಿಲ್ಲತ್‌ ನಗರದ ಇನಾಮ್‌ ಮಸೀದಿ, ಮಹಾಲಕ್ಷ್ಮಿ ಲೇಔಟ್‌ನ ಅಕ್ಬರ್‌ ಮಸೀದಿ, ಚಿಕ್ಕಬಳ್ಳಾಪುರ ರಸ್ತೆಯ ಈದ್ಗಾ ಮೈದಾನ, ಅಮ್ಮವಾರಿಪೇಟೆಯ ಬಾರ್ಲೈನ್‌ ಮಸೀದಿ, ಸೈಯದಾನ ಬಿ ದರ್ಗಾ, ಶಾಹಿ ಲತೀಫಾ ಭಾನು ಮಸೀದಿ, ನಮತ್ ಬಿ ಮಸೀದಿ, ಮಹಮ್ಮದ್‌ ನೂರ್‌ ಮಸೀದಿ, ಶಾಬಾ ಷಾ ಖಲಂದರ್‌ ಮಸೀದಿ, ಷರಿಯಾ ಮಸೀದಿ, ಬಿಲಾಲ್ ಮಸೀದಿ, ಖಾನ್‌ ಸಾಬ್‌ ಮಸೀದಿ, ಶಾಹಿ ಮಸೀದಿಯಲ್ಲಿ ಪ್ರಾರ್ಥನೆ ನಡೆಯಿತು.

ಧರ್ಮ ಸಂದೇಶ: ಮುಸ್ಲಿಂ ಧರ್ಮ ಗುರುಗಳು ಮಾತನಾಡಿ, ‘ಮುಸ್ಲಿಮರು ನಮಾಜ್, ಹಜ್, ರೋಜಾ, ಜಕಾತ್, ಸಿತ್ರಾ ಈ ಪಂಚಸೂತ್ರ ಪಾಲಿಸಿದರೆ ಅಲ್ಲಾನ ಕೃಪೆಗೆ ಪಾತ್ರರಾಗಲು ಸಾಧ್ಯ. ತ್ಯಾಗ, ಬಲಿದಾನ, ಸಹೋದರತೆ, ಏಕತೆ ಸಂದೇಶ ಪಾಲಿಸುವ ಮೂಲಕ ಅಲ್ಲಾಹುವಿನ ಪ್ರೀತಿಗೆ ಪಾತ್ರರಾಗಬೇಕು. ವ್ಯಕ್ತಿತ್ವದಲ್ಲೂ ಅದನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಧರ್ಮ ಸಂದೇಶ ನೀಡಿದರು.

‘ಅಲ್ಲಾ ಜೀವನದಲ್ಲಿ ಕಷ್ಟಗಳನ್ನು ಸಹಿಸುವ ಮತ್ತು ತ್ಯಾಗ ಮನೋಭಾವನೆ ಬೆಳೆಸಿಕೊಳ್ಳುವ ಶಕ್ತಿ ದಯಪಾಲಿಸಲಿ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಆದರೆ, ದ್ವೇಷದಿಂದ ಸರ್ವಸ್ವವನ್ನು ಕಳೆದುಕೊಳ್ಳುತ್ತೇವೆ. ಜಾತಿ, ಮತ, ಧರ್ಮ ಬದಿಗಿಟ್ಟು ಸಹಬಾಳ್ವೆಯ ಜೀವನ ನಡೆಸಿ’ ಎಂದು ಬೋಧಿಸಿದರು.

‘ಬಡತನ ಯಾವುದೇ ಧರ್ಮ ಅಥವಾ ಜಾತಿಗೆ ಸಿಮೀತವಾಗಿಲ್ಲ. ಆಯಾ ಧರ್ಮದಲ್ಲಿನ ಸ್ಥಿತಿವಂತರು ಬಡವರಿಗೆ ಆರ್ಥಿಕ ನೆರವು ನೀಡಿದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ. -ಶಾಂತಿ ಸೌರ್ಹಾದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಸಹೋದರರಂತೆ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

ಸಂಚಾರ ನಿರ್ಬಂಧ: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಿದ್ದ ಹಿನ್ನೆಲೆಯಲ್ಲಿ ಕೋಲಾರ– ಬೆಂಗಳೂರು ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮೈದಾನದೊಳಗೆ ಜಾಗ ಸಾಲದ ಕಾರಣ ಮುಸ್ಲಿಂ ಬಾಂಧವರು ಮೈದಾನದ ಹೊರಗಿನ ರಸ್ತೆ, ಕ್ಲಾಕ್‌ ಟವರ್‌ ಮೇಲ್ಸೇತುವೆಯಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕ ಕೆ.ಶ್ರೀನಿವಾಸಗೌಡ ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು.

ಹಬ್ಬದ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳು ಮುಚ್ಚಿದ್ದವು. ಆಟೊ ಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣ ಹಾಗೂ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ದರ್ಗಾಗಳು, ಮುಸ್ಲಿಂ ಜನವಸತಿ ಇರುವ ಬಡಾವಣೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

Post Comments (+)