ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ಆರೋಗ್ಯವಂತ ಸಮಾಜ ನಿರ್ಮಿಸಿ: ಹೆಚ್ಚುವರಿ ಎಸ್‌ಪಿ ಜಾಹ್ನವಿ

Last Updated 12 ಡಿಸೆಂಬರ್ 2019, 13:18 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾರ್ಥಿಗಳು ದೇಶದ ಆಸ್ತಿ. ಆದ ಕಾರಣ ದುಶ್ಚಟಗಳಿಂದ ದೂರ ಉಳಿದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಕಿವಿಮಾತು ಹೇಳಿದರು.

ನಗರ ಠಾಣೆ ಹಾಗೂ ಗಲ್‌ಪೇಟೆ ಠಾಣೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರೌಢಾವಸ್ಥೆ ತಲುಪಿದ ಯುವಕ ಯುವತಿಯರು ಸಾಮಾನ್ಯವಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಾರ್ವಜನಿಕರು ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದು ಅಪರಾಧ ಚಟುವಟಿಕೆ ತಡೆಯಲು ಸಹಕರಿಸಬೇಕು. ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಅಥವಾ ಮನೆಗೆ ಹೋಗುವಾಗ ಯಾವುದೇ ಸ್ಥಳದಲ್ಲಿ ಅಪರಾಧ ಕೃತ್ಯ ನಡೆದರೆ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

‘ಆಭರಣಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೋಷಕರಿಗೆ ಅರಿವು ಮೂಡಿಸಬೇಕು. ಮುಖ್ಯವಾಗಿ ಸರಗಳ್ಳರ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಅಪರಾಧ ಚಟುವಟಿಕೆ ತಡೆಯಲು ಪೊಲೀಸರು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಸಾರ್ವಜನಿಕರ ಸಹಕಾರ ಸಹ ಮುಖ್ಯ. ಅಪಘಾತ ತಪ್ಪಿಸಲು ಕಟ್ಟುನಿಟ್ಟಾಗಿ ಸಂಚಾರ ನಿಯಮ ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅಪರಿಚಿತ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಅಪರಿಚಿತರು ಕೊಡುವ ಆಹಾರ ಪದಾರ್ಥ ತಿನ್ನಬಾರದು’ ಎಂದು ಹೇಳಿದರು.

‘ಮಕ್ಕಳು ಶಾಲೆಗೆ ಬಂದು ಹೋಗುವಾಗ ಜಾಗ್ರತೆ ವಹಿಸಬೇಕು. ದೂರದ ಊರಿನಿಂದ ಬರುವವರು ಗುಂಪಾಗಿಯೇ ಬರಬೇಕು. ದಾರಿ ಮಧ್ಯೆ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ ಘಟನೆ ಕಂಡುಬಂದರೆ ಸಂಘಟಿತರಾಗಿ ಪ್ರತಿರೋಧ ತೋರಬೇಕು. ಜತೆಗೆ ಆ ಸಂಗತಿಯನ್ನು ಪೋಷಕರಿಗೆ, ಶಿಕ್ಷಕರಿಗೆ ಅಥವಾ ಪೊಲೀಸರಿಗೆ ತಿಳಿಸಬೇಕು’ ಎಂದರು.

ಭವಿಷ್ಯ ನಾಶ: ‘ಮಾದಕ ವ್ಯಸನದಿಂದ ಭವಿಷ್ಯವೇ ಸರ್ವ ನಾಶವಾಗುತ್ತದೆ. ಮಾದಕ ವಸ್ತುಗಳ ಸೇವನೆಯು ಜೀವಕ್ಕೆ ಅಪಾಯಕಾರಿ. ಮಾದಕ ವ್ಯಸನಿಯು ತನ್ನ ಕುಟುಂಬದ ನೆಮ್ಮದಿ ಕೆಡಿಸುತ್ತಾನೆ. ಜತೆಗೆ ಸಮಾಜಕ್ಕೂ ಕಂಟಕ ಪ್ರಾಯನಾಗುತ್ತಾನೆ’ ಎಂದು ಡಿವೈಎಸ್ಪಿ ಚೌಡಪ್ಪ ಅಭಿಪ್ರಾಯಪಟ್ಟರು.

‘ಮಾದಕ ವ್ಯಸನವು ಮಾರಕ ಪಿಡುಗು. ಸುತ್ತಮುತ್ತಲಿನವರೇ ಈ ವ್ಯಸನಕ್ಕೆ ಒಳಗಾಗಿರಬಹುದು. ಅವರಿಗೆ ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಣೆ ಕಂಡುಬಂದಲ್ಲಿ ಶಿಕ್ಷಕರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.

‘ಶಾಲಾ-ಕಾಲೇಜು ಮಕ್ಕಳಲ್ಲಿ ಅಪರಾಧ ಕೃತ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶಕ್ಕೆ ಅಪರಾಧ ತಡೆ ಮಾಸಾಚರಣೆ ನಡೆಸಲಾಗುತ್ತಿದೆ. ಶಾಲಾ-ಕಾಲೇಜು ಬಳಿ ಅಪರಿಚಿತರು ಕಂಡುಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ಅವರೊಂದಿಗೆ ಮಾತನಾಡಬಾರದು. ಬಲವಂತವಾಗಿ ಮಾತನಾಡಲು ಯತ್ನಿಸಿದರೆ ಶಿಕ್ಷಕರಿಗೆ ಮಾಹಿತಿ ನೀಡಬೇಕು’ ಎಂದರು.

ಸುವರ್ಣ ಸೆಂಟ್ರಲ್ ಶಾಲೆ, ಮಹಿಳಾ ಸಮಾಜ, ಬಿಎಂಎಸ್ ಹಾಗೂ ಮೆಥೋಡಿಸ್ಟ್ ಶಾಲೆ ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ನಗರ ಠಾಣೆ ಇನ್‌ಸ್ಪೆಕ್ಟರ್‌ ಫಾರೂಕ್‌ ಪಾಷಾ, ಎಸ್‍ಐ ಅಣ್ಣಯ್ಯ, ಗಲ್‌ಪೇಟೆ ಠಾಣೆ ಎಸ್‍ಐ ಪ್ರದೀಪ್‌ಸಿಂಗ್‌ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT