ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕರ ಸಮಾಜ ನಿರ್ಮಿಸಿ: ಡಾ.ಕೆ.ಜ್ಯೋತಿ

Last Updated 5 ಆಗಸ್ಟ್ 2021, 14:02 IST
ಅಕ್ಷರ ಗಾತ್ರ

ಕೋಲಾರ: ‘ಧನುರ್ವಾಯು ಹಾಗೂ ಗಂಟಲು ಮಾರಿ ರೋಗ ನಿಯಂತ್ರಣಕ್ಕೆ ಲಸಿಕೆ ಪಡೆಯುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಿ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸಮುದಾಯ ಆರೋಗ್ಯಾಧಿಕಾರಿ ಡಾ.ಕೆ.ಜ್ಯೋತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅರಾಭಿಕೊತ್ತನೂರು ಆರೋಗ್ಯ ಉಪ ಕೇಂದ್ರದಲ್ಲಿ ಸುತ್ತಮುತ್ತಲ ಗ್ರಾಮಗಳ ಶಾಲಾ ಮಕ್ಕಳಿಗೆ ಗುರುವಾರ ಧನುರ್ವಾಯು ಹಾಗೂ ಗಂಟಲು ಮಾರಿ ತಡೆ ಲಸಿಕೆ ನೀಡಿ ಮಾತನಾಡಿ, ‘ಕೋವಿಡ್ ಆತಂಕದ ಕಾರಣಕ್ಕೆ ಮಕ್ಕಳು ಶಾಲೆಗೆ ಬರುವಂತಿಲ್ಲ. ಆದ್ದರಿಂದ ಶಿಕ್ಷಕರ ಸಹಕಾರ ಪಡೆದು ಗ್ರಾಮದಲ್ಲೇ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

‘ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರಿಗೆ ಕೋವಿಡ್‌ ಬಗ್ಗೆ ಮಾರ್ಗದರ್ಶನ ನೀಡಬೇಕು. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಪಡೆದುಕೊಳ್ಳಬೇಕು. ಆಸ್ತಿ, ಹಣ ಸಂಪಾದನೆಗಿಂತ ಆರೋಗ್ಯ ಮುಖ್ಯ’ ಎಂದು ತಿಳಿಸಿದರು.

‘ಮಳೆಗಾಲವಾದ ಕಾರಣ ಎಲ್ಲೆಂದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳು ಆವರಿಸುವ ಭೀತಿಯಿದೆ. ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಜನರು ಅಗತ್ಯ ಕ್ರಮ ಕೈಗೊಳ್ಳಬೇಕು. ಮನೆಗಳ ಬಳಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ಕೋವಿಡ್ ಜಾಗೃತಿ: ‘ಪ್ರತಿ ವರ್ಷದಂತೆ ಈ ಬಾರಿಯೂ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಆರೋಗ್ಯ ಉಪ ಕೇಂದ್ರದ ವ್ಯಾಪ್ತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಧನುರ್ವಾಯು, ಗಂಟಲು ಮಾರಿ ತಡೆಗೆ ಲಸಿಕೆ ಹಾಕಲಾಗುತ್ತಿದೆ’ ಎಂದು ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಎಚ್.ವಿ.ವಾಣಿ ವಿವರಿಸಿದರು.

‘ಗ್ರಾಮೀಣ ಭಾಗದ ಜನರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಸ್ವಚ್ಛ ಪರಿಸರವಿದ್ದರೆ ಮಾತ್ರ ಉತ್ತಮ ಆರೋಗ್ಯ ಎಂಬುದನ್ನು ಅರಿತು ಮನೆ ಸುತ್ತಮುತ್ತ ಸ್ವಚ್ಛತೆಗೆ ಒತ್ತು ನೀಡಿ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ’ ಎಂದು ಹೇಳಿದರು.

ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಶಿಕ್ಷಕರಾದ ಭವಾನಿ, ಸುಗುಣಾ, ಲೀಲಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT