ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ನಿವಾರಿಸಿ: ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ

ನಾರಾಯಣಸ್ವಾಮಿ ಕಿವಿಮಾತು
Last Updated 20 ಸೆಪ್ಟೆಂಬರ್ 2021, 13:57 IST
ಅಕ್ಷರ ಗಾತ್ರ

ಕೋಲಾರ: ‘ಅಪೌಷ್ಟಿಕತೆ ಬಗ್ಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅರಿವು ಮೂಡಿಸಿ ಆರೋಗ್ಯಕರ ಸಮಾಜ ನಿರ್ಮಿಸೋಣ’ ಎಂದು ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ದಿನಾಚರಣೆ, ಪೌಷ್ಟಿಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರಬೇಕು. ಪೌಷ್ಟಿಕ ಆಹಾರ ಸೇವನೆಯ ಮಹತ್ವ, ಯಾವ ಆಹಾರ ಸೇವಿಸಬೇಕು ಎಂಬ ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕು. ಕೋವಿಡ್ ವಿರುದ್ಧ ಸಂಜೀವಿನಿಯಾಗಿರುವ ಲಸಿಕೆ ಕುರಿತು ಜನರಿಗೆ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣವು ಆರೋಗ್ಯ ಇಲಾಖೆಯ ಮೂಲ ಉದ್ದೇಶ’ ಎಂದರು.

‘ಮಹಿಳೆಯರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಿ ಅಪೌಷ್ಟಿಕತೆಯಿಂದ ಹೊರತಂದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರನ್ನು ಮೊದಲನೇ ಅಥವಾ ಎರಡನೇ ತ್ರೈಮಾಸಿಕದಲ್ಲಿ ಗುರುತಿಸಿ ನೋಂದಾಯಿಸಬೇಕು. ಇದರಿಂದ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲು ಅನುಕೂಲವಾಗುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮ್ಯ ದೀಪಿಕಾ ಸಲಹೆ ನೀಡಿದರು.

‘ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವಂತ ಮಗು ಜನಿಸಿದರೆ ಒಳ್ಳೆಯ ಸಮುದಾಯ ಕಟ್ಟಲು ಸಾಧ್ಯ. ಪೋಷಣಾ ಅಭಿಯಾನದ ಮೂಲಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅಪೌಷ್ಟಿಕತೆ ನಿವಾರಣೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಜಾಗೃತಿ ವಹಿಸಿ: ‘ಸಂಭವನೀಯ ಕೋವಿಡ್‌ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ತಾಯಂದಿರು ಜಾಗೃತಿ ವಹಿಸಬೇಕು. ಪೋಷಣಾ ಅಭಿಯಾನ ಯಶಸ್ವಿಗೊಳಿಸಬೇಕು’ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಮನವಿ ಮಾಡಿದರು.

‘ಮಗು ಗರ್ಭದಲ್ಲಿ ಇರುವಾಗಿನಿಂದ ಸಾವಿರ ದಿನಗಳ ಕಾಲ ಮಿದುಳು ಬೆಳೆಯುತ್ತದೆ. ಆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ಪೌಷ್ಟಿಕ ಆಹಾರ ನೀಡಬೇಕು. ಮಕ್ಕಳಿಗೆ ಹೆಚ್ಚಿನ ಪೌಷ್ಟಿಕ ಆಹಾರ ನೀಡಿದರೆ ಅಪೌಷ್ಟಿಕತೆ ನಿರ್ಮೂಲನೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಉದ್ದೇಶ ಸಫಲಗೊಳಿಸಿ: ‘ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿದರೂ ಹೆಚ್ಚಿನ ಶಕ್ತಿ ನೀಡುವಂತಹ ಆಹಾರ ತಿನ್ನಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಉದ್ದೇಶ ಸಫಲಗೊಳಿಸಬೇಕು. ಕೋವಿಡ್‌ ತುರ್ತು ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ಆಶಾ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಆಹಾರ, ಮಾತ್ರೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ಎಚ್.ವಿ.ವಾಣಿ ತಿಳಿಸಿದರು.

ಅರಾಭಿಕೊತ್ತನೂರು ಗ್ರಾ.ಪಂ ಸದಸ್ಯೆ ರೇಣುಕಮ್ಮ, ಪಿಡಿಒ ಅನುರಾಧಾ, ಕಾರ್ಯದರ್ಶಿ ಪ್ರಮೀಳಾ, ಅಂಗನವಾಡಿ ಮೇಲ್ವಿಚಾರಕಿ ತಾರಕೇಶ್ವರಿ, ಆರೋಗ್ಯ ನೈರ್ಮಲ್ಯ ಸಮಿತಿ ಸದಸ್ಯ ರಾಮಚಂದ್ರಪ್ಪ, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆ ಅನಿತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT