ಮಂಗಳವಾರ, ಮಾರ್ಚ್ 9, 2021
26 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯ

ತಂಬಾಕು ಸೇವನೆ ಸ್ವಪ್ರೇರಿತ ಅಪರಾಧ: ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಂಬಾಕು ಉತ್ಪನ್ನ ಸೇವನೆ ಚಟ ತ್ಯಜಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಕಿವಿಮಾತು ಹೇಳಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅನುಷ್ಠಾನ ಸಂಬಂಧ ಇಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ತಂಬಾಕು ಉತ್ಪನ್ನಗಳ ಸೇವನೆಯು ಸ್ವಯಂಪ್ರೇರಿತ ಅಪರಾಧ’ ಎಂದು ಅಭಿಪ್ರಾಯಪಟ್ಟರು.

‘ತಂಬಾಕು ಉತ್ಪನ್ನ ಸೇವಿಸುವವರ ಆರೋಗ್ಯ ಹಾಳಾಗುವುದರ ಜತೆಗೆ ಅಕ್ಕಪಕ್ಕದವರ ಆರೋಗ್ಯವೂ ಕೆಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧಿಸಲಾಗಿದ್ದು, ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

‘ತಂಬಾಕು ಬೆಳೆಯುವ ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ತಂಬಾಕು ಉತ್ಪನ್ನ ಸೇವನೆಯಲ್ಲಿ ತೊಡಗಿರುವವರನ್ನು ಆ ಚಟದಿಂದ ಮುಕ್ತಗೊಳಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆ ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ವ್ಯಕ್ತಿಗಳ ಆರೋಗ್ಯ ಸುಧಾರಣೆಗಾಗಿ ಸರ್ಕಾರ ಸಾವಿರಾರು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಜನ ದುಶ್ಚಟಗಳಿಂದ ದೂರ ಉಳಿದರೆ ಈ ಹಣ ಸಮಾಜದ ಅಭಿವೃದ್ಧಿಗೆ ಬಳಕೆಯಾಗಿ ಸಾಕಷ್ಟು ಉಪಯೋಗವಾಗುತ್ತದೆ’ ಎಂದರು.

ದಂಡ ವಿಧಿಸಿ: ‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಜತೆಗೆ ತಂಬಾಕು ಉತ್ಪನ್ನಗಳನ್ನು ಜಗಿದು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವಂತಿಲ್ಲ. ಈ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಮತ್ತು ಸಿಗರೇಟು ಸೇದುವವರಿಗೆ, ತಂಬಾಕು ಉತ್ಪನ್ನ ಜಗಿಯುವವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಂಡ ವಿಧಿಸಬೇಕು’ ಎಂದು ಸೂಚಿಸಿದರು.

‘ಶಾಲೆಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯು ಅಪರಾಧ. ತಂಬಾಕು ಉತ್ಪನ್ನ ಸೇವನೆಯ ದುಷ್ಪರಿಣಾಮ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಅರಿವು ಮೂಡಿಸಬೇಕು. ಇದರಿಂದ ಮಕ್ಕಳು ಮನೆಯ ಸದಸ್ಯರನ್ನು ಜಾಗೃತಗೊಳಿಸುತ್ತಾರೆ. ಜತೆಗೆ ಅವರು ಭವಿಷ್ಯದಲ್ಲಿ ಈ ದುಶ್ಚಟಕ್ಕೆ ಬಲಿಯಾಗುವುದಿಲ್ಲ’ ಎಂದು ಸಲಹೆ ನೀಡಿದರು.

‘ಎಲ್ಲಾ ರೀತಿಯ ಪಾನ್‌ ಮಸಾಲಗಳ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಿ. ಆಹಾರ ಸುರಕ್ಷತಾ ಕಾಯ್ದೆ ಉಲ್ಲಂಘಿಸುವ ಹೋಟೆಲ್, ಅಂಗಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ. ಜತೆಗೆ ನಿಯಮಿತವಾಗಿ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ. ಬೇಕರಿಗಳಲ್ಲಿ ಬಳಸುವ ಮೈದಾ ಮತ್ತು ಬಣ್ಣಗಳನ್ನು ಪರಿಶೀಲಿಸಿ. ಆಹಾರ ಪದಾರ್ಥಗಳ ಕಲಬೆರಕೆಗೆ ಕಡಿವಾಣ ಹಾಕಿ’ ಎಂದು ಆದೇಶಿಸಿದರು.

ತಂಬಾಕು ಮುಕ್ತ: ‘ಜಿಲ್ಲೆಯಲ್ಲಿ 41 ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಘೋಷಿಸಲಾಗಿದೆ. 5 ರೀತಿಯ ಪಾನ್ ಮಸಾಲಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಕೋಟ್ಪಾ ಕಾಯ್ದೆ ಅನುಷ್ಠಾನಕ್ಕೆ 36 ತಂಡ ರಚಿಸಲಾಗಿದೆ. ಕಾಯ್ದೆ ಉಲ್ಲಂಘನೆ ಸಂಬಂಧ 1,327 ಪ್ರಕರಣ ದಾಖಲಿಸಿ, ₹ 1.22 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಲಹೆಗಾರ ಮೊಹಮ್ಮದ್ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು