ಶುಕ್ರವಾರ, ಸೆಪ್ಟೆಂಬರ್ 17, 2021
29 °C

ವಿಭಜನೆಗೂ ಮುನ್ನ ಗೋಲ್ಡನ್ ಡೇರಿ ನಿರ್ಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವಿಭಜನೆಗೆ ಈಗಾಗಲೇ ಆಡಳಿತ ಮಂಡಳಿ ಹಾಗೂ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ ವಿಭಜಿಸಲು ತಮ್ಮ ಅಭ್ಯಂತರವಿಲ್ಲ ಎಂದು ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಲಾರ ಮುಖ್ಯ ಡೇರಿ 27 ವರ್ಷಗಳ ಹಳೆಯ ಡೇರಿಯಾಗಿದ್ದು, ಇಲ್ಲಿನ ಯಂತ್ರೋಪಕರಣ ಹಾಗೂ ತಂತ್ರಜ್ಞಾನ ಸ್ಪರ್ಧಾತ್ಮಕ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಸೂಕ್ತವಾಗಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಿರುವ ಹಿನ್ನೆಲೆಯಲ್ಲಿ ಮುಖ್ಯ ಡೇರಿ ಆವರಣದಲ್ಲಿ ₹ 130 ಕೋಟಿ ವೆಚ್ಚದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಎಂವಿಕೆ ಗೋಲ್ಡನ್ ಡೇರಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೋಲ್ಡನ್ ಡೇರಿಗೆ ಸರ್ಕಾರದ ಅನುಮತಿ ಪಡೆದು ಘಟಕ ನಿರ್ಮಾಣಕ್ಕಾಗಿ ಟೆಂಡರ್ ಆರಂಭಿಸುವ ಸಂದರ್ಭದಲ್ಲಿ ಹಲವು ಕಾರಣವೊಡ್ಡಿ ಸಹಕಾರ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಡೆಯಾಜ್ಞೆ ನೀಡಲಾಗಿತ್ತು. ಬಳಿಕ ಒಕ್ಕೂಟದ ಸ್ಥಿತಿಗತಿ ಹಾಗೂ ಗೋಲ್ಡನ್ ಡೇರಿ ಅವಶ್ಯಕತೆ ಬಗ್ಗೆ ಸಹಕಾರ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ನಂತರ ತಡೆಯಾಜ್ಞೆ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಒಕ್ಕೂಟ ವಿಭಜನೆ ಹಂತದಲ್ಲಿರುವುದರಿಂದ ಕೋಲಾರ ಜಿಲ್ಲೆಯ ಹಾಲು ಶೇಖರಣೆ, ಉತ್ಪಾದನೆ, ಮಾರುಕಟ್ಟೆ ಅಂಶ ಪರಿಗಣಿಸಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಶಿಫಾರಸ್ಸಿನೊಂದಿಗೆ ಗೋಲ್ಡನ್‌ ಡೇರಿಗೆ ನೂತನ ಪ್ರಸ್ತಾವ ಸಲ್ಲಿಸಲು ಸೂಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

₹ 185 ಕೋಟಿ ಅಂದಾಜು ವೆಚ್ಚದ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಸರ್ಕಾರದ ಹಂತದಲ್ಲಿ ಅನುಮೋದನೆ ನೀಡದಿರುವುದು ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಮಾಡಿದ ದ್ರೋಹ. ಒಕ್ಕೂಟದ ವಿಭಜನೆಗೂ ಮುನ್ನ ಗೋಲ್ಡನ್ ಡೇರಿ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿ ಜಿಲ್ಲೆಯ ಹಾಲು ಉತ್ಪಾದಕರ ಹಿತ ಕಾಯಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.