ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುವಾದಿ ಪಕ್ಷಕ್ಕೆ ಅಧಿಕಾರ ಕೊಡಬೇಡಿ: ಜಿ.ಸಿ.ಬಯ್ಯಾರೆಡ್ಡಿ ಸಲಹೆ

ಕಟ್ಟಡ ಕಾರ್ಮಿಕರ ರಾಜಕೀಯ ಸಮಾವೇಶ
Last Updated 14 ಏಪ್ರಿಲ್ 2019, 11:19 IST
ಅಕ್ಷರ ಗಾತ್ರ

ಕೋಲಾರ: ‘ಕೋಮು ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಇದಕ್ಕೆ ಕಾರ್ಮಿಕರು, ರೈತರು ಅವಕಾಶ ನೀಡಬೇಕು’ ಎಂದು ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಕೆಪಿಆರ್‍ಎಸ್ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ, ಆದರೆ ಎಲ್ಲೂ ಸಹ ರೈತ, ಕಾರ್ಮಿಕರಪರ ಭಾಷಣ ಮಾಡಿಲ್ಲ’ ಎಂದು ದೂರಿದರು.

‘ಸಂವಿಧಾನ ಸುಡುವ, ಸಂವಿಧಾನವೇ ಬೇಡ ಎನ್ನುವ, ಸಮಾನತೆ ಬೇಡ ಎನ್ನುವ ಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸುವ ಸಲುವಾಗಿ ಜಾತ್ಯತೀತ ಪಕ್ಷಗಳನ್ನು ಬೆಂಬಲಿಸುವುದು ಅನಿವಾರ್ಯ. ಹೀಗಾಗಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವವರಿಗೆ ಮತ ಚಲಾಯಿಸಿ’ ಎಂದು ಕೋರಿದರು.

‘ಮೋದಿ ಚೌಕಿದಾರ್ ಅಲ್ಲ, ಹಣ ಲೂಟಿ ಹೊಡೆದು ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ, ಲಲಿತ್ ಮೋದಿ, ಮಲ್ಯ ಹಾಗೂ ರೆಫೆಲ್ ಡೀಲ್‌ನಲ್ಲಿ ₹ 30 ಸಾವಿರ ಕೋಟಿ ಅನಿಲ್ ಅಂಬಾನಿಗೆ ವರ್ಗಾವಣೆ ಮಾಡುವಲ್ಲಿ ಮೋದಿ ಭಾಗಿದಾರ್ ಆಗಿದ್ದಾರೆ. ಫಸಲ್ ಭಿಮಾ ಯೋಜನೆಯಲ್ಲಿ 7 ಎನ್‍ಎಂಸಿ ಕಂಪನಿಗಳಿಗೆ ಕೋಟ್ಯಂತರ ಲಾಭ ಮಾಡಿಕೊಟ್ಟಿದ್ದಾರೆ’ ಎಂದರು.

‘ರಾಜಕೀಯ ಪಕ್ಷಗಳು ಎಲೆಕ್ಟ್ರೋಲ್ ಬಾಂಡ್ ಮೂಲಕ ಸಂಗ್ರಹಿಸಿದ ₹ 2,773 ಕೋಟಿ ಪೈಕಿ 2,000 ಕೋಟಿ ಬಿಜೆಪಿಗೆ ಹೋಗಿದೆ. ಕಾನೂನು ತಿದ್ದುಪಡಿ ತರುವ ಮೂಲಕ ಮೋದಿ ಅನುಕೂಲ ಮಾಡಿಕೊಟ್ಟು ಅದೇ ಬಹುರಾಷ್ಟ್ರೀಯ ಕಂಪನಿಗಳಿಂದ ಹಣವನ್ನು ಪಕ್ಷಕ್ಕೆ ದೇಣಿಗೆ ಪಡೆದುಕೊಂಡಿದ್ದಾರೆ. ಇದೀಗ ಸುಪ್ರಿಂ ಕೋರ್ಟ್ ಯಾವ್ಯಾವ ಪಕ್ಷಗಳಿಗೆ ಎಲೆಕ್ಟ್ರೋಲ್ ಬಾಂಡ್ ಮೂಲಕ ಎಷ್ಟು ಹಣ ಸಂದಾಯವಾಗಿದೆ ಎಂಬುದನ್ನು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತೆ ಸೂಚಿಸಿದೆ’ ಎಂದು ನುಡಿದರು.

‘ಮೋದಿ ಅಧಿಕಾರಕ್ಕೆ ಬರುವ ಮುನ್ನ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಲಾಭಾಂಶ ನೀಡುವುದಾಗಿ ಹೇಳಿಲ್ಲ ಎಂದು ಸುಪ್ರಿಮ್ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಸಾಲ ಮನ್ನಾಗೆ ದುಡ್ಡಿಲ್ಲ ಎಂದವರು ಕಾರ್ಪೋರೇಟ್ ಕಂಪನಿಗಳಿಗೆ ₹ 13 ಲಕ್ಷ ಕೋಟಿ ಸಾಲ, ತೆರಿಗೆ ವಿನಾಯಿತಿ ನೀಡಿದ್ದಾರೆ. ಮೋದಿಗೆ ರೈತರ ಬಗ್ಗೆ ಹೇಳಲು ಏನೂ ಇಲ್ಲ, ಹೀಗಾಗಿ ಜನರನ್ನು ಭಾವನಾತ್ಮಕವಾಗಿ ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಮಾತನಾಡಿ, ‘ರೈತೆ, ಕಾರ್ಮಿಕರ 44 ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ಪಕ್ಷಗಳಿಗೂ ಮನವಿ ನೀಡಲಾಗಿದ್ದು, ಪ್ರಚಾರದ ವೇಳೆ ಎಲ್ಲೂ ಚರ್ಚೆಗೂ ತೆಗೆದುಕೊಂಡಿಲ್ಲ. ಅವರಿಗೆ ಪಾಠ ಕಲಿಸುವ ಶಕ್ತಿ ಕಾರ್ಮಿಕರ ಕೈಯಲಿದೆ’ ಎಂದು ಎಚ್ಚರಿಸಿದರು.

‘ಫಡರೇಷನ್ ವತಿಯಿಂದ ಎಲ್ಲ ರಾಜಕೀಯ ಪಕ್ಷಗಳಿಗೆ 44 ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ರೈತರ ಆತ್ಮಹತ್ಯೆ, ವಲಸೆ ತಡೆಯಲು ನಿಮ್ಮ ಕಾರ್ಯಕ್ರಮಗಳೇನು ಎಂದು ಜನರ ಮುಂದಿಟ್ಟು ಚರ್ಚೆಗೆ ಒಳಪಡಿಸುವಂತೆ ಒತ್ತಾಯಿಸಲಾಗಿದೆ’ ಎಂದರು.

‘ಹಿಂದೆ ಕಾಂಗ್ರೆಸ್ ಕೂಡ ರೈತರ ಸಮಸ್ಯೆ ಬಗ್ಗೆ ಗಮನಹರಿಸದೆ ಬಂಡವಾಳಶಾಹಿಗಳ ಪರವಾಗಿಯೇ ಇತ್ತು. ಚುನಾವಣೆಯಲ್ಲಿ ಸೋತ ನಂತರ ಬುದ್ದಿ ಕಲಿತು ಕೃಷಿ ಬಜೆಟ್, ನ್ಯಾಯ ಯೋಜನೆ ಇನ್ನಿತರೆ ಘೋಷಣೆಗಳನ್ನು ರಾಜೀವ್‌ಗೌಡ ನೇತೃತ್ವದ ಚುನಾವಣಾ ಪ್ರಣಾಳಿಕೆ ಸಮಿತಿ ಜನರ ಮುಂದಿಟ್ಟಿದೆ. ನಮ್ಮ ಹೋರಾಟದಿಂದ ಕಾಂಗ್ರೆಸ್ ಇಂದು ಜನರ ಬಗ್ಗೆ ಮಾತನಾಡುತ್ತಿದೆ’ ಎಂದು ಹೇಳಿದರು.

‘ಬಿಜೆಪಿ ಮನುಷ್ಯ ವಿರೋಧಿ. ಬಹುಸಂಖ್ಯಾತರ ಆಹಾರ ಪದ್ದತಿಯನ್ನು ಪ್ರಶ್ನಿಸುತ್ತಿದೆ. ದೇಶದಲ್ಲಿ 15 ಕೋಟಿ ಕಟ್ಟಡ ಕಾರ್ಮಿಕರಿದ್ದು, ಕಲ್ಯಾಣ ಮಂಡಳಿಯಲ್ಲಿ ₹ 8,500 ಕೋಟಿ ಇದೆ. ಇದರಿಂದಲೇ ಕಾರ್ಮಿಕರಿಗೆ ಪಿಂಚಣಿ ಇನ್ನಿತರೆ ಸೌಲಭ್ಯ ಕಲ್ಪಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ಸಾಮಾಜಿಕ ಸುರಕ್ಷಾ ಮಸೂದೆ ಜಾರಿಗೆ ತರುವ ಮೂಲಕ 12 ಸೌಕರ್ಯಗಳನ್ನು ರದ್ದುಗೊಳಿಸಲು ಚಿಂತಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಪಿಆರ್‍ಎಸ್ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಫೆಡರೇಷನ್‍ನ ಜಿಲ್ಲಾಧ್ಯಕ್ ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಭೀಮರಾಜ್ ಖಜಾಂಚಿ ಅಶೋಕ್, ನವೀನ್‍ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT