ಶನಿವಾರ, ಆಗಸ್ಟ್ 20, 2022
21 °C
ಬಂದ್‌ ಬೆಂಬಲಿಸಿ ರೈತ ಸಂಘ ಸದಸ್ಯರ ಮೊಟ್ಟೆ ಚಳವಳಿ

ಶಾಸಕ ಯತ್ನಾಳ ಪ್ರತಿಕೃತಿ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ‘ಕರ್ನಾಟಕ ಬಂದ್‌’ ಕರೆ ಬೆಂಬಲಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶನಿವಾರ ಮೊಟ್ಟೆ ಚಳವಳಿ ನಡೆಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿಗೆ ಸಗಣಿ ಎರಚಿ ಮೊಟ್ಟೆ ಹೊಡೆದು ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರ ಕನ್ನಡದ ದನಿ ಅಡಗಿಸುವ ಪ್ರಯತ್ನ ಮಾಡಿದೆ. ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶಕ್ಕಾಗಿ ಮರಾಠ ಅಭಿವೃದ್ಧಿ ನಿಗಮ ರಚಿಸಿದೆ. ಮರಾಠ ಮತದಾರರ ಓಲೈಕೆಗಾಗಿ ನಾಡಿನ ಹಿತ ಬಲಿ ಕೊಟ್ಟಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಮರಾಠ ನಿಗಮ ರಚನೆ ಖಂಡಿಸಿದ ಕನ್ನಡಪರ ಹೋರಾಟಗಾರರ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಪ್ರಚಾರಕ್ಕಾಗಿ ಶಾಸಕ ಸ್ಥಾನದ ಘನತೆ ಮರೆತು ಮನಬಂದಂತೆ ಹೇಳಿಕೆ ನೀಡುತ್ತಿರುವ ಅವರಿಗೆ ನಾಡು, ನುಡಿ ಬಗ್ಗೆ ಸ್ವಲ್ಪವೂ ಗೌರವವಿಲ್ಲ’ ಎಂದು ಕಿಡಿಕಾರಿದರು.

ಜನರನ್ನು ವಿಭಜಿಸುತ್ತಿದೆ‘ ‘ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ಜಾತಿ, ಭಾಷೆಗೊಂದು ನಿಗಮ, ಪ್ರಾಧಿಕಾರ ರಚಿಸುತ್ತಾ ಜನರನ್ನು ವಿಭಜಿಸುತ್ತಿದೆ. ಸರ್ಕಾರಕ್ಕೆ ಕನ್ನಡ ನಾಡು, ನುಡಿಗಿಂತ ಚುನಾವಣಾ ಗೆಲುವು ಮುಖ್ಯವಾಗಿದೆ. ಮರಾಠ ನಿಗಮ ರಚಿಸುವ ಮೂಲಕ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಗಡಿ ಭಾಗ ಮತ್ತು ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ರಕ್ಷಿಸುವುದನ್ನು ಬಿಟ್ಟು ಅನ್ಯ ಭಾಷಿಕರನ್ನು ಸಂತೃಪ್ತಿಗೊಳಿಸಲು ಹೊರಟಿದೆ. ಕನ್ನಡ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದೆ ಇತರೆ ಭಾಷೆಗಳ ಅಭಿವೃದ್ಧಿಗೆ ಮಣೆ ಹಾಕಿ ನಾಡು, ನುಡಿಯ ಕಗ್ಗೊಲೆ ಮಾಡಿದೆ. ಕೋವಿಡ್‌ ಸಂಕಷ್ಟದಿಂದ ತತ್ತರಿಸಿರುವ ನಾಡಿನ ಜನರಿಗೆ ಸಹಾಯಹಸ್ತ ಚಾಚದೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮರಾಠ ನಿಗಮಕ್ಕೆ ₹ 50 ಕೋಟಿ ನೀಡಿದೆ’ ಎಂದು ಟೀಕಿಸಿದರು.

ಘೇರಾವ್‌ ಎಚ್ಚರಿಕೆ: ‘ಸರ್ಕಾರ ಮರಾಠ ನಿಗಮ ರದ್ದುಪಡಿಸಬೇಕು. ಶಾಸಕ ಯತ್ನಾಳ ಅವರು ಕನ್ನಡಪರ ಹೋರಾಟಗಾರರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅವರಿಗೆ ಘೇರಾವ್‌ ಹಾಕಿ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಚಾಂದ್‌ಪಾಷಾ, ಆಂಜಿನಪ್ಪ, ಕಿರಣ್, ಸುಪ್ರೀಂಚಲ, ತಿಮ್ಮಣ್ಣ, ನಾಗೇಶ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.