ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಶಿಕ್ಷಣಕ್ಕೆ ಶಿಬಿರ ಸಹಕಾರಿ: ಡಿಡಿಪಿಐ

ಜಿಲ್ಲೆಯಲ್ಲಿ ಬೇಸಿಗೆ ಸಂಭ್ರಮ ಕಲಿಕಾ ಶಿಬಿರಕ್ಕೆ ಚಾಲನೆ: ಪ್ರಯೋಜನೆ ಪಡೆಯಲು ಮನವಿ
Last Updated 24 ಏಪ್ರಿಲ್ 2019, 11:39 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮೀಣ ಮಕ್ಕಳಲ್ಲಿ ಗಾಂಧೀಜಿಯವರ ಮೂಲ ಶಿಕ್ಷಣ ಹಾಗೂ ಜನಪದದ ಪರಂಪರೆ ಉಳಿಸಿ ಬೆಳೆಸಲು ಹಮ್ಮಿಕೊಂಡಿರುವ ಬೇಸಿಗೆ ಸಂಭ್ರಮ ವಿಶಿಷ್ಟ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

‘ಸ್ವಲ್ಪ ಓದು ಸ್ವಲ್ಪ ಮೋಜು’ ಪರಿಕಲ್ಪನೆಯೊಂದಿಗೆ ನಗರದ ರಹಮತ್‌ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆರಂಭಗೊಂಡ ‘ಬೇಸಿಗೆ ಸಂಭ್ರಮ’ ಕಲಿಕೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಸರ್ಕಾರ ರಾಜ್ಯದ 30 ಜಿಲ್ಲೆಗಳ 156 ಕಂದಾಯ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಿದೆ’ ಎಂದರು.

‘ಬರಪೀಡಿತವೆಂದು ಘೋಷಣೆಯಾಗಿರುವ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಬೇಸಿಗೆಯಲ್ಲೂ ಮಕ್ಕಳಿಗೆ ಊಟ ನೀಡಲಾಗುತ್ತಿದೆ. 150 ಮಕ್ಕಳ ಸಂಖ್ಯೆ ಇರುವ ಶಾಲೆಗಳಲ್ಲಿ ಬೇಸಿಗೆ ಸಂಭ್ರಮ ಕಲಿಕಾ ಶಿಬಿರ ನಡೆಸಲಾಗುತ್ತಿದೆ. ಕನಿಷ್ಠ 25ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲೂ ಈ ಶಿಬಿರ ಆರಂಭಿಸಬಹುದು’ ಎಂದು ವಿವರಿಸಿದರು.

‘6 ಮತ್ತು 7ನೇ ತರಗತಿ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದು, ಈ ಮಕ್ಕಳಿಗೆ ಜನಪದ ಸಂಸ್ಕೃತಿ, ಕ್ರೀಡೆ, ರಂಗೋಲಿ, ಅಲುಗುಣಿ ಮಣೆ, ಚೌಕಾಭಾರ ಕಲಿಸಲಾಗುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬೇಸಿಗೆ ಸಂಭ್ರಮ ಶಿಬಿರ ಹೆಚ್ಚು ಉಪಯುಕ್ತವಾಗಲಿದೆ’ ಎಂದು ಹೇಳಿದರು.

‘ಮಕ್ಕಳು ಬೇಸಿಗೆ ರಜೆಯಲ್ಲಿ ಈಜಲು ಹೋಗುವುದು ಅಥವಾ ಅಪಾಯಕಾರಿ ಕ್ರೀಡೆಗಳಲ್ಲಿ ಪಾಲ್ಗೊಂಡು ಜೀವಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಇದೆ. ಇದನ್ನು ತಡೆಯುವ ಮೂಲಕ ಮಕ್ಕಳಿಗೆ ಶಾಲೆಯಲ್ಲೇ ಸ್ವಲ್ಪ ಓದು ಸ್ವಲ್ಪ ಮೋಜು ಪರಿಕಲ್ಪನೆಯೊಂದಿಗೆ ನಲಿಯುತ್ತಾ ಕಲಿಯಲು ಶಿಬಿರ ನೆರವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಅರಿವು ಮೂಡುತ್ತದೆ: ‘ರಾಜ್ಯ ಸರ್ಕಾರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ನೀಡುವಂತೆ ಆದೇಶಿಸಿದೆ. ಮಕ್ಕಳು ಊಟಕ್ಕೆ ಬರುವುದರಿಂದ ಅವರಿಗೆ ಊಟದ ಜತೆಗೆ ಪರಂಪರೆ, ಕ್ರೀಡೆ, ಸಂಸ್ಕೃತಿಯ ಅರಿವು ಮೂಡುತ್ತದೆ’ ಎಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ತಿಳಿಸಿದರು.

‘ಬೇಸಿಗೆ ಸಂಭ್ರಮ ಶಿಬಿರ ಒಂದು ತಿಂಗಳ ಕಾಲ ನಡೆಯಲಿದೆ. 25 ಮಕ್ಕಳಿರುವ ಶಾಲೆಗಳ ಶಿಕ್ಷಕರು ತಮ್ಮ ಶಾಲೆಯಲ್ಲಿ ಈ ಶಿಬಿರ ನಡೆಸಲು ಮುಂದೆ ಬಂದರೆ ಅವರಿಗೆ ನಗದು ಸಹಿತ ರಜೆ ಸೌಲಭ್ಯ ನೀಡಲಾಗುವುದು. ಮಕ್ಕಳ ಸಮಗ್ರ ಅಭಿವೃದ್ಧಿಗೆ ಈ ಶಿಬಿರ ಪೂರಕ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸಲಹೆ ನೀಡಿದರು.

ಪ್ರತ್ಯೇಕ ಆ್ಯಪ್‌: ‘4 ವಾರ ನಡೆಯುವ ಈ ಶಿಬಿರದಲ್ಲಿ ಮಕ್ಕಳು ನಲಿಯುತ್ತಾ ಕಲಿಯಲು ಅವಕಾಶವಿದೆ. ಶಿಬಿರದಲ್ಲಿ ಒಂದು ವಾರ ಕುಟುಂಬ, ಒಂದು ವಾರ ಶಿಕ್ಷಣ, ಒಂದು ವಾರ ವೈಯುಕ್ತಿಕ ಸ್ವಚ್ಛತೆ ಹಾಗೂ ಮತ್ತೊಂದು ವಾರ ನೈರ್ಮಲ್ಯ ಶಿಕ್ಷಣ ನೀಡಲಾಗುತ್ತದೆ’ ಎಂದು ಮಧ್ಯಾಹ್ನದ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ ವಿವರಿಸಿದರು.

‘ಬೇಸಿಗೆ ಸಂಭ್ರಮ ನಡೆಸುವ ಶಾಲೆಗಳಿಗೆ ಇಲಾಖೆ ಪ್ರತ್ಯೇಕ ಆ್ಯಪ್‌ ನೀಡಿದ್ದು, ಪ್ರತಿದಿನದ ಕಾರ್ಯಕ್ರಮವನ್ನು ಇದರಲ್ಲಿ ಅಡಕ ಮಾಡಬಹುದು. ಶಿಬಿರ ಆರಂಭಿಸುವ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಶಿಬಿರಕ್ಕೆ ಅಗತ್ಯವಾದ ಆಟೋಪಕರಣ ಸಹ ಒದಗಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಬೇಸಿಗೆ ಸಂಭ್ರಮ ಶಿಬಿರದ ನೋಡಲ್ ಅಧಿಕಾರಿ ನಾಗವೇಣಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ವಿಷಯ ಪರಿವೀಕ್ಷಕ ಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ಆರ್.ಶ್ರೀನಿವಾಸನ್, ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT