ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವ ರದ್ದುಪಡಿಸಿ: ಮನವಿ

ಸರವಣ ಕುಮಾರ್‌ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ: ಆರೋಪ
Last Updated 21 ಜನವರಿ 2020, 10:53 IST
ಅಕ್ಷರ ಗಾತ್ರ

ಕೋಲಾರ: ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಕೆಜಿಎಫ್‌ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಸರವಣ ಕುಮಾರ್‌ರ ಸದಸ್ಯತ್ವ ರದ್ದುಪಡಿಸುವಂತೆ ಒತ್ತಾಯಿಸಿ ಕೆಜಿಎಫ್‌ನ ಅಂಡರ್ಸನ್‌ಪೇಟೆ ನಿವಾಸಿಗಳು ಇಲ್ಲಿ ಸೋಮವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

‘ಕೆಜಿಎಫ್ ನಗರಸಭೆಯ ಅಂಡರ್ಸನ್‌ಪೇಟೆ ವಾರ್ಡ್ ಮೀಸಲಾತಿಯು ಪರಿಶಿಷ್ಟ ಜಾತಿಗೆ ನಿಗದಿಯಾಗಿತ್ತು. ಆದರೆ, ಸರವಣಕುಮಾರ್ ಪರಿಶಿಷ್ಟ ಜಾತಿಯಲ್ಲದಿದ್ದರೂ ಸುಳ್ಳು ದಾಖಲೆಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಅವರು ಮೀಸಲಾತಿ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಅಂಡರ್ಸನ್‌ಪೇಟೆ ನಿವಾಸಿ ಸಂಪತ್‌ಕುಮಾರ್ ದೂರಿದರು.

‘ಮೂಲತಃ ತಮಿಳುನಾಡು ರಾಜ್ಯದ ಸರವಣಕುಮಾರ್ ವ್ಯಾಪಾರಕ್ಕಾಗಿ ಕೆಜಿಎಫ್‌ಗೆ ಬಂದಿದ್ದಾರೆ. ಅವರು ಕಮ್ಮ ನಾಯ್ಡು ಸಮುದಾಯಕ್ಕೆ ಸೇರಿದವರು. ಜಾತಿ ಸಂಬಂಧ ನಕಲಿ ಪ್ರಮಾಣಪತ್ರ ನೀಡಿರುವ ಸರವಣಕುಮಾರ್ ವಿರುದ್ಧ ಕೆಜಿಎಫ್ ತಹಶೀಲ್ದಾರ್ ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ’ ಎಂದು ಹೇಳಿದರು.

‘ಸರವಣಕುಮಾರ್ ಕಮ್ಮ ನಾಯ್ಡು ಎಂಬ ಮೇಲ್ಜಾತಿಗೆ ಸೇರಿದ್ದರೂ ಪರಿಶಿಷ್ಟ ಜಾತಿಯವರೆಂದು ನಕಲಿ ದಾಖಲೆಪತ್ರ ಸೃಷ್ಟಿಸಿ ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ. ಪರಿಶಿಷ್ಟ ಸಮುದಾಯದವರಿಗೆ ವಂಚಿಸಿರುವ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ’ ಎಂದು ವಿವರಿಸಿದರು.

‘ಸರವಣಕುಮಾರ್‌ ಅವರು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬೂರು ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ನಾಯಕ ಸಮುದಾಯಕ್ಕೆ ಸೇರಿದವರೆಂದು ಕೆಜಿಎಫ್‌ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ನಂತರ ಬಂದ ದೂರು ಆಧರಿಸಿ ಪರಿಶೀಲಿಸಿದಾಗ ಕಮ್ಮ ನಾಯ್ಡು ಸಮುದಾಯವು ಮೇಲ್ಜಾತಿಗೆ ಸೇರಿರುವ ಅಂಶ ಬಯಲಾಗಿದೆ. ಅವರ ವಂಚನೆ ಸಂಬಂಧ ಸಮಗ್ರ ತನಿಖೆ ನಡೆಸಿ ಪರಿಶಿಷ್ಟ ಜಾತಿಗೆ ನ್ಯಾಯ ದೊರಕಿಸಬೇಕು’ ಎಂದು ಕೋರಿದರು.

ಆಕ್ಷೇಪ ಸಲ್ಲಿಸಿದ್ದೆ: ‘ಚುನಾವಣೆಯಲ್ಲಿ ಸರವಣಕುಮಾರ್ ವಿರುದ್ಧ ನಾನು ಸ್ಪರ್ಧಿಸಿದ್ದೆ. ನಾಮಪತ್ರ ಪರಿಶೀಲನೆ ವೇಳೆಯೇ ಆಕ್ಷೇಪ ಸಲ್ಲಿಸಿದ್ದೆ. ಆಗ ಕಾಲಮಿತಿಯೊಳಗೆ ದಾಖಲೆಪತ್ರ ಸಂಗ್ರಹಿಸಲು ಸಾಧ್ಯವಾಗದ ಕಾರಣ ತಡವಾಯಿತು’ ಎಂದು ವಿವರಿಸಿದರು.

‘ಸರವಣಕುಮಾರ್ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಪಟ್ಟ ಮೂಲ ದಾಖಲೆ ಸಲ್ಲಿಸುವವರೆಗೆ ನಗರಸಭೆ ಸದಸ್ಯತ್ವ ರದ್ದುಪಡಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಜಿಲ್ಲಾಧಿಕಾರಿಯು ದಾಖಲೆಪತ್ರ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT