ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಕಿಮೊಥೆರಪಿ ಚಿಕಿತ್ಸೆ ಕೇಂದ್ರ

ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಹತ್ತು ಹಾಸಿಗೆ ಸೌಲಭ್ಯ
Last Updated 31 ಜುಲೈ 2022, 5:58 IST
ಅಕ್ಷರ ಗಾತ್ರ

ಕೋಲಾರ: ‘ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್‌ ಕಿಮೊಥೆರಪಿ ಚಿಕಿತ್ಸಾ ಕೇಂದ್ರ (ಕ್ಯಾನ್ಸರ್‌ ಕಿಮೊಥೆರಪಿ ಇನ್‌ಫ್ಯೂಸನ್‌ ಸೆಂಟರ್‌) ಕಲ್ಪಿಸಿದ್ದು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗುವ ಅವಶ್ಯವಿಲ್ಲ. ಇಲ್ಲೇ ಸೌಲಭ್ಯ ಸಿಗಲಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‍ಕುಮಾರ್‌ ತಿಳಿಸಿದರು.

‘10 ಬೆಡ್‌ಗಳ ಸೌಲಭ್ಯ ಇದಾಗಿದ್ದು, ರಾಜ್ಯದಲ್ಲಿ ಎರಡು ಕಡೆ ಮಾತ್ರ ಇಂಥ ಕೇಂದ್ರವಿದೆ’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಸ್ಪತ್ರೆ ಆಡಳಿತ ಹಾಗೂ ಆಸ್ಪತ್ರೆ ವೈದ್ಯರ ಬಗ್ಗೆ ದೂರುಗಳಿವೆಯಲ್ಲಾ ಎಂಬ ಪ್ರಶ್ನೆಗೆ, ‘ತಾಯಿ ಮತ್ತು ಮಕ್ಕಳ ವಿಭಾಗದ 100 ಬೆಡ್‌ ಸೇರಿದಂತೆ ಆಸ್ಪತ್ರೆಯ ಎಲ್ಲಾ 500 ಬೆಡ್‌ಗಳು ಭರ್ತಿಯಾಗಿರುತ್ತವೆ. ನಿತ್ಯ 450 ಹೆರಿಗೆ ಮಾಡಲಾಗುತ್ತಿದೆ. ಸಾವಿರಕ್ಕೂ ಅಧಿಕ ಮಂದಿ ಹೊರರೋಗಿಗಳಾಗಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುಷ್ಮಾನ್‌ ಭಾರತ್‌ - ಆರೋಗ್ಯ ಕರ್ನಾಟಕ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ರಾಜ್ಯದಲ್ಲಿ 3 ನೇ ಸ್ಥಾನದಲ್ಲಿದ್ದೇವೆ. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇಷ್ಟೊಂದು ರೋಗಿಗಳು ಬರುತ್ತಿದ್ದರೇ’ ಎಂದು ಮರು ಪ್ರಶ್ನೆ ಹಾಕಿದರು.

‘ಆಸ್ಪತ್ರೆ, ವೈದ್ಯರ ವಿರುದ್ಧ ಯಾವುದೇ ದೂರು ಬಂದಲ್ಲಿ ನಮ್ಮನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದುತಿಳಿಸಿದರು.

‘ತಜ್ಞ ವೈದ್ಯರ ಕೊರತೆ ನೀಗಿಸಲು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಲು ಪ್ರಸೂತಿ ಮತ್ತು ಸ್ತ್ರೀರೋಗ, ಅರಿವಳಿಕೆ ಹಾಗೂ ಮಕ್ಕಳ ವಿಭಾಗದಲ್ಲಿ ಡಿಎನ್‌ಬಿ ಕೋರ್ಸ್‌ ಪ್ರಾರಂಭಿಸಲಾಗಿದೆ. 17 ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ಯಾರಾಮೆಡಿಕಲ್ ಕೋರ್ಸ್‌ಚಾಲನೆಯಲ್ಲಿದ್ದು, 340 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಈಚೆಗೆ ಭೋಪಾಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಕಾಂಗರೂ ಮದರ್‌ ಕೇರ್‌ ಸಮ್ಮೇಳನದಲ್ಲಿ ಆಸ್ಪತ್ರೆಯ ಎಸ್‌ಎನ್‌ಸಿ ವೈದ್ಯೆ ಡಾ.ಎಲ್‌.ರಕ್ಷಾ ಮಂಡಿಸಿದ ಪ್ರಬಂಧಕ್ಕೆ ಬಹುಮಾನ ಬಂದಿದೆ’ ಎಂದರು.

ಗರ್ಭಿಣಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಪ್ರೊ.ನಾರಾಯಣಸ್ವಾಮಿ, ಆರ್‌ಎಂಓ ಡಾ.ಬಾಲಸುಂದರ್, ಮಕ್ಕಳ ತಜ್ಞ ಡಾ.ಶ್ರೀನಾಥ್, ನರ್ಸ್‌ ಅಧೀಕ್ಷಕಿ ಎಸ್.ವಿಜಯಮ್ಮ ಹಾಗೂ
ಸುಮತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT