ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಮಳೆ: ಕತ್ತಲೆಯಲ್ಲಿನ್ನೂ ಗ್ರಾಮಗಳು

l ಇಂದು ಶಾಲಾ– ಕಾಲೇಜು ಪುನರಾರಂಭ l ಗ್ರಾಮಗಳಲ್ಲಿ ಇನ್ನೂ ಪೂರೈಕೆಯಾಗದ ವಿದ್ಯುತ್
Last Updated 12 ಜೂನ್ 2018, 12:10 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳ ಕಾಲ ಸುರಿದ ಭಾರೀ ಮಳೆ, ಗಾಳಿಗೆ ಜಿಲ್ಲೆಯ ವಿವಿಧೆಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಸೋಮವಾರ ಮಳೆ ಆರ್ಭಟ ತಗ್ಗಿದ್ದರೂ ಅದು ಉಂಟು ಮಾಡಿದ ಪರಿಣಾಮ ಇನ್ನೂ ಸುಧಾರಣೆಗೆ ಬಂದಿಲ್ಲ. ಮಡಿಕೇರಿಯ ಹಲವು ಕಡೆ ಸೋಮವಾರ ಇಡೀ ದಿವಸ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು. ಅಪ್ಪಂಗಳ, ಸುಂಟಿಕೊಪ್ಪ, ಅವಂದೂರು, ಅಟ್ಟಿಹೊಳೆ, ಉಡೋತ್‌, ಚಟ್ಟಳ್ಳಿ, ಕಾಟಿಕೇರಿ, ನಾಪೋಕ್ಲು, ಅಯ್ಯಂಗೇರಿ, ಭಾಗಮಂಡಲದಲ್ಲಿ ವಿದ್ಯುತ್‌ ಇಲ್ಲ. ಸೋಮವಾರ ಇಡೀ ದಿವಸ ವಿದ್ಯುತ್‌ ಮಾರ್ಗ ಸರಿಪಡಿಸಲು ಜಿಟಿಜಿಟಿ ಮಳೆಯ ನಡುವೆ ಸೆಸ್ಕ್‌ ಸಿಬ್ಬಂದಿ ಶ್ರಮಿಸಿದರು. ಆದರೂ, ಕೆಲವು ಮಾರ್ಗಗಳು ದುರಸ್ತಿ ಆಗಿಲ್ಲ.

ಶಾಲೆಗಳು ಆರಂಭ: ಮಳೆ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಸೋಮವಾರ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ನೀಡ ಲಾಗಿತ್ತು. ಮಂಗಳವಾರದಿಂದ ಪುನರಾರಂಭಗೊಳ್ಳಲಿವೆ. ಮಡಿಕೇರಿಯಲ್ಲಿ ಬಿಡುವು ನೀಡುತ್ತಾ ಮಳೆ ಆಗುತ್ತಿದೆ. ಮಳೆ ಬಿಟ್ಟ ಕೂಡಲೇ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 104.56 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 22.60 ಮಿ.ಮೀ. ಮಳೆ ಆಗಿತ್ತು. ಜನವರಿಯಿಂದ ಇದುವರೆಗೂ 761.41 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 369.68 ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 116.65 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 26.60 ಮಿ.ಮೀ. ಮಳೆ ಸುರಿದಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ 92.90 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 104.12 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ಕಸಬಾ 71.20, ನಾಪೋಕ್ಲು 131.20, ಸಂಪಾಜೆ 90.20, ಭಾಗಮಂಡಲ 174, ವಿರಾಜಪೇಟೆ ಕಸಬಾ 104, ಹುದಿಕೇರಿ 124, ಶ್ರೀಮಂಗಲ 118.20, ಪೊನ್ನಂಪೇಟೆ 82.20, ಅಮ್ಮತಿ 71, ಬಾಳಲೆ 58, ಸೋಮವಾರಪೇಟೆ ಕಸಬಾ 138.80, ಶನಿವಾರಸಂತೆ 101.40, ಶಾಂತಳ್ಳಿ 196, ಕೊಡ್ಲಿಪೇಟೆ 135.50, ಸುಂಟಿಕೊಪ್ಪ 42, ಕುಶಾಲನಗರ 11ಮಿ.ಮೀ. ಮಳೆಯಾಗಿದೆ.

ಅತಿವೃಷ್ಟಿ: ನಿಯಂತ್ರಣ ಕೊಠಡಿ ಆರಂಭ
ಮಡಿಕೇರಿ: -ಅತಿವೃಷ್ಟಿ ವೇಳೆ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ವಿವರ ಇಂತಿದೆ. ಜಿಲ್ಲಾಧಿಕಾರಿ ಕಚೇರಿ 08272 221077, ಜಿಲ್ಲಾ ಅಗ್ನಿಶಾಮಕ ಕಚೇರಿ 101, 08272 229299, ಮಡಿಕೇರಿ ತಾಲ್ಲೂಕು ಕಚೇರಿ 08272 228396, ನಗರಸಭೆ 08272 220111, ಸೋಮವಾರಪೇಟೆ ತಾಲ್ಲೂಕು ಕಚೇರಿ 08276 282045, ವಿರಾಜಪೇಟೆ ತಾಲ್ಲೂಕು ಕಚೇರಿ 08274256328 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT