ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಜಿ ಅಕ್ಕಿ ಗಿರಣಿ ವಿರುದ್ಧ ಪ್ರಕರಣ

ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮ ದಾಸ್ತಾನು: ₹ 29.37 ಲಕ್ಷದ ಅಕ್ಕಿ ಜಪ್ತಿ
Last Updated 29 ಆಗಸ್ಟ್ 2021, 15:33 IST
ಅಕ್ಷರ ಗಾತ್ರ

ಕೋಲಾರ: ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ಪಾಲಿಶ್‌ ಮಾಡಿ ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರುತ್ತಿದ್ದ ನಗರದ ಕಾರಂಜಿಕಟ್ಟೆಯ ಬಾಲಾಜಿ ಅಕ್ಕಿ ಗಿರಣಿ ಮಾಲೀಕ ರಘುವಂಶಿ ಅವರ ವಿರುದ್ಧ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಜಾಗೃತ ದಳದ ಮುಖ್ಯಸ್ಥ ಕೆ.ರಾಮೇಶ್ವರಪ್ಪ ಅವರ ಸೂಚನೆಯಂತೆ ಇಲಾಖೆ ಉಪ ನಿರ್ದೇಶಕರು ಹಾಗೂ ಸಿಬ್ಬಂದಿಯು ಬಾಲಾಜಿ ಅಕ್ಕಿ ಗಿರಣಿ ಮೇಲೆ ಆ.25ರಂದು ದಾಳಿ ನಡೆಸಿದಾಗ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆಯಾಗಿತ್ತು.

ಬಳಿಕ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರು ಗಿರಣಿಯಲ್ಲಿ ಪರಿಶೀಲನೆ ನಡೆಸಿ ಮಾಲೀಕ ರಘುವಂಶಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಈ ಆದೇಶದನ್ವಯ ಕೋಲಾರ ನಗರ ವಿಭಾಗದ ಆಹಾರ ನಿರೀಕ್ಷಕ ಸುಬ್ರಮಣಿ ಅವರು ಪ್ರಕರಣ ದಾಖಲಿಸಿದ್ದಾರೆ. ರಘುವಂಶಿ ಅವರು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ಪಾಲಿಶ್ ಮಾಡಿ ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಸಂಗತಿ ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ.

ಅಧಿಕಾರಿಗಳು ದಾಳಿ ವೇಳೆ ಗಿರಣಿಯಲ್ಲಿದ್ದ ಪಾಲಿಶ್ ಆದ ಗ್ರೇಡ್ ಎ ಅಕ್ಕಿ ತಲಾ 25 ಕೆ.ಜಿಯ 69 ಚೀಲ, ಕುಸುವಲ ಅಕ್ಕಿ ತಲಾ 25 ಕೆ.ಜಿಯ 460 ಚೀಲ, ಪಾಲಿಶ್ ಮಾಡದ ಕುಸುವಲ ಅಕ್ಕಿ ತಲಾ 30ಕೆ.ಜಿಯ 97 ಚೀಲ, ಬಂಕರ್‌ಗಳಲ್ಲಿ ಇದ್ದ ಪಾಲಿಶ್‌ ಆಗದ ಗ್ರೇಡ್ ಎ ಮಾದರಿಯ 503 ಕ್ವಿಂಟಾಲ್‌, ಬಂಕರ್‌ಗಳಲ್ಲಿ ತುಂಬಿಸಿದ್ದ ಪಾಲಿಶ್‌ ಆದ ಗ್ರೇಡ್‌ ಎ ಮಾದರಿಯ 506 ಕ್ವಿಂಟಾಲ್‌ ಅಕ್ಕಿ, ಗ್ರೇಡ್‌ 3 ಮಾದರಿಯ 6.50 ಕ್ವಿಂಟಾಲ್‌ ನುಚ್ಚು ಅಕ್ಕಿ ಜಪ್ತಿ ಮಾಡಿದ್ದಾರೆ. ಒಟ್ಟಾರೆ ₹ 29.37 ಲಕ್ಷ ಮೌಲ್ಯದ 1,177 ಕ್ವಿಂಟಾಲ್‌ ಅಕ್ಕಿ ಜಪ್ತಿಯಾಗಿದೆ.

ಪಡಿತರ ಅಕ್ಕಿ: ರಘುವಂಶಿ ಅವರು ಗಿರಣಿಯಲ್ಲಿ ದಾಸ್ತಾನಿದ್ದ ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ಕೆಲ ಬಿಲ್‌ಗಳನ್ನು ಮಾತ್ರ ಸಲ್ಲಿಸಿದ್ದಾರೆ. ಆದರೆ, ದಾಸ್ತಾನು ವಿವರವುಳ್ಳ ಪುಸ್ತಕ, ವಹಿವಾಟಿನ ದಾಖಲೆಪತ್ರ ಹಾಗೂ ಇತರೆ ಯಾವುದೇ ಲೆಕ್ಕಪತ್ರ ಹಾಜರುಪಡಿಸಿಲ್ಲ. ಗಿರಣಿಯ ಬಂಕರ್‌ಗಳಲ್ಲಿದ್ದ ಅಕ್ಕಿಯು ಮೇಲ್ನೋಟಕ್ಕೆ ಪಡಿತರ ಅಕ್ಕಿ ಎಂದು ಕಂಡುಬಂದಿದೆ. ಈ ಗ್ರೇಡ್ ಎ ಅಕ್ಕಿಯು ರಾಜ್ಯದಲ್ಲಿ ವಿತರಿಸುವ ಅನ್ನಭಾಗ್ಯ ಯೋಜನೆಯ ಅಕ್ಕಿಯಾಗಿದೆ ಎಂದು ಸುಬ್ರಮಣಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ರಘುವಂಶಿ ಅವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ–1955ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT