ಚನ್ನದಾಸರ್ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ: ಸಂಸದ ಕೆ.ಎಚ್.ಮುನಿಯಪ್ಪ ಭರವಸೆ

7
ಪ್ರತಿಭಾ ಪುರಸ್ಕಾರ ಸಮಾರಂಭ

ಚನ್ನದಾಸರ್ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ: ಸಂಸದ ಕೆ.ಎಚ್.ಮುನಿಯಪ್ಪ ಭರವಸೆ

Published:
Updated:
Deccan Herald

ಕೋಲಾರ: ‘ಚನ್ನದಾಸರ್ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಕೊಡಿಸುವ ಸಂಬಂಧ ಜಿಲ್ಲಾಡಳಿತದ ಜತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.

ಚನ್ನದಾಸರ್ ಕ್ಷೇಮಾಭಿವೃದ್ಧಿ ಸಂಘವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾನತಾಡಿ, ‘ಚನ್ನದಾಸರ್‌ ಸಮುದಾಯ ಇಂದಿಗೂ ಇದೆ. ಈ ಸಮುದಾಯದವರನ್ನು ಯಾವ ಜಾತಿಗೆ ಸೇರಿಸಬೇಕೆಂಬ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಬೇಕು’ ಎಂದರು.

‘ಸಮುದಾಯದವರು ಇರುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಕುಲ ಕಸುಬಿನ ಆಧಾರದಲ್ಲಿ ಜಾತಿ ನಿರ್ಧರಿಸಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಸಾಕಷ್ಟು ಉಪಜಾತಿಗಳಿದ್ದು, ಈ ಸಮುದಾಯ
29ನೇ ಸ್ಥಾನದಲ್ಲಿದೆ. ಚನ್ನದಾಸ ಎಂದು ಇರುವುದನ್ನು ಚನ್ನದಾಸರ್ ಎಂದು ತಿದ್ದುಪಡಿ ಮಾಡಿದರೆ ಯಾವ ಜಾತಿಗೆ ಸೇರಿಸಬೇಕೆಂದು ತೀರ್ಮಾನಿಸಬಹುದು’ ಎಂದು ಹೇಳಿದರು.

‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರ ವಿದ್ಯಾಸಿರಿ ಯೋಜನೆ ಜಾರಿಗೆ ತಂದಿತು. ಸಮುದಾಯದ ಮಕ್ಕಳು ಈ ಯೋಜನೆಯ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ತೊಂದರೆ ನೀಡಿಲ್ಲ: ‘ಚನ್ನದಾಸರ್‌ ಸಮುದಾಯದವರು ಎಂದಿಗೂ ಇತರ ಸಮುದಾಯದವರಿಗೆ ತೊಂದರೆ ನೀಡಿಲ್ಲ. ಪರರ ಶ್ರೇಯಸ್ಸು ಬಯಸುವ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಆಗುತ್ತಿಲ್ಲ’ ಎಂದು ಸಾಮಾಜಿಕ ಪರಿವರ್ತನೆ ಜನಾಂದೋಲನ ರಾಜ್ಯ ಘಟಕದ ಸಂಚಾಲಕ ಐಪಲ್ಲಿ ನಾರಾಯಣಸ್ವಾಮಿ ವಿಷಾದಿಸಿದರು.

‘ಯಾವುದೇ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬಂದರೆ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯ. ಆದರೆ, ಜಾತಿ ಪ್ರಮಾಣಪತ್ರ ಇಲ್ಲದೆ ಸಮುದಾಯದ ಮಕ್ಕಳು ಶಿಕ್ಷಣ ಮತ್ತು ಉದ್ಯೋಗಾವಕಾಶದಿಂದ ವಂಚಿತರಾಗಿದ್ದಾರೆ. ಜಾತಿ ಪ್ರಮಾಣಪತ್ರಕ್ಕಾಗಿ ನಿರಂತರ ಹೋರಾಟ ನಡೆಸಿದರೂ ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ. ಸಮುದಾಯಕ್ಕೆ ಸರ್ಕಾರದ ಸವಲತ್ತು ಸಿಗುತ್ತಿಲ್ಲ. ಮೀಸಲಾತಿ ನೀಡದಿದ್ದರೆ ತೀವ್ರ ಹೋರಾಟ ನಡೆಸುವುದು ಖಚಿತ’ ಎಂದು ಎಚ್ಚರಿಕೆ ನೀಡಿದರು.

‘ಅಂಬೇಡ್ಕರ್ ಸಮಾಜದ ಪ್ರತಿ ವ್ಯಕ್ತಿಗೂ ಸಮಾನ ಅವಕಾಶ ಕಲ್ಪಿಸಬೇಕೆಂದು ಸಂವಿಧಾನದಲ್ಲಿ ದಾಖಲಿಸಿದ್ದಾರೆ. ಸಂವಿಧಾನದ ಆಧಾರದಲ್ಲಿ ಸೌಕರ್ಯ ನೀಡಿದರೆ ಅಳ್ವಿಕೆ ನಡೆಸುವವರಿಗೆ ತೊಂದರೆಯಾಗುತ್ತದೆ ಎಂದು ಅಂಬೇಡ್ಕರ್ ಆಶಯಗಳನ್ನು ಗಾಳಿಗೆ ತೂರಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಡೆಗಣಿಸಿವೆ: ‘ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶೋಷಿತ ಸಮುದಾಯಗಳನ್ನು ಸರ್ಕಾರಗಳು ಕಡೆಗಣಿಸಿವೆ. ಜಾನಪದ, ಕಲೆ, ಸಾಹಿತ್ಯ, ತತ್ವಪದವು ಅಂಬಾನಿ, ಮೋದಿ, ಐಎಎಸ್‌ ಅಧಿಕಾರಿಗಳ ಮನೆಯಲ್ಲಿ ಜೀವಂತವಾಗಿಲ್ಲ. ಇವುಗಳನ್ನು ಉಳಿಸಿ ರಕ್ಷಿಸಿದ ಕೀರ್ತಿ ಚನ್ನದಾಸರ್‌ ಸಮುದಾಯಕ್ಕೆ ಸಲ್ಲುತ್ತದೆ. ಸಮುದಾಯದ ಹಕ್ಕುಗಳನ್ನು ಹೋರಾಟ ಮೂಲಕ ಪಡೆದುಕೊಳ್ಳಬೇಕು’ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

‘ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ ಚನ್ನದಾಸರ್‌ ಸಮುದಾಯದವರು ಮೂಲೆಗುಂಪಾಗಿದ್ದಾರೆ. ಶಿಕ್ಷಣ, ಉದ್ಯೋಗ ಇಲ್ಲದಿದ್ದರೂ ಸ್ವಾವಲಂಬಿ ಬದುಕು ಕಟ್ಟಿಕೊಂಡು ಗೌರವಯುತವಾಗಿ ಬದುಕುತ್ತಿದ್ದಾರೆ. ಸಮಾಜದಲ್ಲಿ ಪ್ರಶ್ನೆ ಮಾಡದವರು ಶೋಷಣೆಗೆ ಒಳಗಾಗುತ್ತಾರೆ. ಪ್ರತಿ ವಿಚಾರದಲ್ಲೂ ಮುನ್ನುಗ್ಗುವ ಪ್ರಯತ್ನ ಸಮುದಾಯದಿಂದ ಆಗಬೇಕು’ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತ್ತಕೋತ್ತರ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಚಂದ್ರಶೇಖರ್, ಚನ್ನದಾಸರ್‌ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ.ಚಲಪತಿ, ಜಿಲ್ಲಾ ಘಟಕದ ಅಧ್ಯಕ್ಷ ಘಟ್ಟಪ್ಪ ದಾಸರ್, ದಲಿತ ಸಂಘರ್ಷ ಸಮಿತಿ ಮುಖಂಡ ಟಿ.ವಿಜಿಕುಮಾರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !