ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸೆಳೆಯಲು ಕರಪತ್ರ

Last Updated 29 ಮೇ 2018, 7:21 IST
ಅಕ್ಷರ ಗಾತ್ರ

ಧಾರವಾಡ: ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣ ಭಾಗದ ಶಾಲೆಗಳು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಕರಪತ್ರ ಹಂಚುವ ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ಆಕರ್ಷಿಸತೊಡಗಿದೆ.

ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ‘ಸೌಲಭ್ಯ ಉಚಿತ, ಕಲಿಕೆ ಖಚಿತ’ ಎಂಬ ಘೋಷವಾಕ್ಯದೊಂದಿಗೆ ಇಂಥ ಕರಪತ್ರವೊಂದನ್ನು ಕಲಘಟಗಿ ಶಾಲೆಯ ಭೋಗೇನಾಗರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಂಚಿ, ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸುತ್ತಿರುವುದು ಕಂಡುಬಂತು.

‘ಉಚಿತ ಪಠ್ಯಪುಸ್ತಕ, ಸಮವಸ್ತ್ರ, ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ, ಅಕ್ಷರದಾಸೋಹ ಮತ್ತು ಕ್ಷೀರ ಭಾಗ್ಯ ಯೋಜನೆ, ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ಶೂ ಮತ್ತು ಸಾಕ್ಸ್‌, ಪ್ರತಿಭಾ ಕಾರಂಜಿ, ವಿದ್ಯಾರ್ಥಿನಿಯರಿಗೆ ಶುಚಿ ಪ್ಯಾಡ್‌, ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆ, ಸ್ಮಾರ್ಟ್‌ ಕ್ಲಾಸ್‌, ಉಚಿತ ಆರೋಗ್ಯ ತಪಾಸಣೆ, ಸಾರಿಗೆ ಭತ್ಯೆ, ನಲಿ–ಕಲಿ ಪದ್ಧತಿ, ಕಬ್ಬಿಣಾಂಶ ಮಾತ್ರೆಗಳನ್ನು ಉಚಿತವಾಗಿ ಮಕ್ಕಳಿಗೆ ನೀಡಲಾಗುವುದು. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ’ ಎಂಬ ಕರಪತ್ರ ಶಾಲೆಯ ಸುತ್ತಮುತ್ತಲಿನ ಊರುಗಳಲ್ಲಿ ಹಂಚಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯೋಪಾಧ್ಯಾಯ ಈಶ್ವರಪ್ಪ ಜವಳಿ, ‘ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ದಾಖಲಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ. ಪಾಠ ಹಾಗೂ ಪ್ರವಚನದೊಂದಿಗೆ ಸಾಕಷ್ಟು ಸೌಲಭ್ಯಗಳು ಉಚಿತವಾಗಿ ಲಭ್ಯವಿರುವಾಗ ಬೇರೆಡೆ ಸೇರಿಸುವ ಬದಲು, ಸರ್ಕಾರಿ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಬೇಕು ಎಂದು ಸಾರಲಾಗುತ್ತಿದೆ’ ಎಂದರು.

‘ಭೋಗೇನಾಗರಕೊಪ್ಪ ಶಾಲೆಗೆ ಕಳೆದ ಸಾಲಿನಲ್ಲಿ 60 ಮಕ್ಕಳು ದಾಖಲಾಗಿದ್ದರು. ಊರಿನ ಜನಸಂಖ್ಯೆ 2400ರಷ್ಟಿದೆ. ಹೀಗಾಗಿ 1ರಿಂದ 8ನೇ ತರಗತಿವರೆಗೂ ಈ ಶಾಲೆಯಲ್ಲಿ 363 ಮಕ್ಕಳು ಓದುತ್ತಿದ್ದಾರೆ. ಊರಿನ ಜನ ಹಾಗೂ ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಮಕ್ಕಳು ಪಡೆಯಬೇಕು ಎಂಬುದು ನಮ್ಮ ಹಾಗೂ ಇಲಾಖೆಯ ಆಶಯ. ಹೀಗಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯಲು ಇಂಥ ಪ್ರಯತ್ನ ನಡೆಸುವಂತೆ ಸುತ್ತೋಲೆ ಹೊರಡಿಸಿದೆ. ನಾವೂ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

‘ಶಾಲಾ ಅಭಿವೃದ್ಧಿ ಸಮಿತಿ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಜತೆಗೂಡಿ ಕರಪತ್ರ ಮುದ್ರಿಸಿ ಹಂಚುತ್ತಿದ್ದೇವೆ. ಪಾಲಕರಿಂದಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಲ್ಲಿ 45 ಜನ ಸೇನೆಯಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ’ ಎಂದು ಈಶ್ವರಪ್ಪ ಹೇಳಿದರು.

ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಪ್ರಯತ್ನ ಕುರಿತು ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ‘ಇಲಾಖೆ ವತಿಯೊಂದು ಸುಮಾರು 5 ಸಾವಿರ ಕರಪತ್ರಗಳನ್ನು ಮುದ್ರಿಸಲಾಗಿದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಿದೆ. ಆ ಮೂಲಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT