ಭಾನುವಾರ, ನವೆಂಬರ್ 28, 2021
20 °C
ಜಾಗೃತಿ ಮೂಡಿಸುತ್ತೇವೆ: ಒಕ್ಕೂಟದ ಉಪಾಧ್ಯಕ್ಷ ಜೋಗಮಲ್ ಹೇಳಿಕೆ

ಪ್ರವರ್ಗ–1ರ ಜಾತಿಗಳ ಒಕ್ಕೂಟದ ಚಿಂತನ ಮಂಥನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಒಕ್ಕೂಟದ ವತಿಯಿಂದ ನಗರದಲ್ಲಿ ಭಾನುವಾರ (ಅ.17) ರಾಜ್ಯದ ಪ್ರಥಮ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಪ್ರವರ್ಗ–1ರ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಆರ್.ಜೋಗಮಲ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ನಗರದ ಟೇಕಲ್ ರಸ್ತೆಯ ಯಾದವ ಸಮುದಾಯ ಭವನದಲ್ಲಿ ಬೆಳಿಗ್ಗೆ 10ಕ್ಕೆ ಸಭೆ ಆರಂಭವಾಗಲಿದೆ. ಒಕ್ಕೂಟದ ಕಾರ್ಯಾಧ್ಯಕ್ಷ ಮೌಲಾಲಿ ಹೊನ್ನಪ್ಪ ಬಂಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸುತ್ತಾರೆ’ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2ನೇ ಸಭೆ ನಡೆಯಲಿದೆ. ಬಳಿಕ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಚಿಂತನ ಮಂಥನ ಸಭೆ ನಡೆಸಿ ಸಮುದಾಯದವರಲ್ಲಿ ಜಾಗೃತಿ ಮೂಡಿಸುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ಶೈಕ್ಷಣಿಕ ಸೌಲಭ್ಯಗಳನ್ನು ಪ್ರವರ್ಗ–1ರ ಜಾತಿಗಳ ವಿದ್ಯಾರ್ಥಿಗಳಿಗೂ ಕೊಡಬೇಕು’ ಎಂದು ಒತ್ತಾಯಿಸಿದರು.

‘ಭೂ ಒಡೆತನ ಯೋಜನೆ ಅನುಷ್ಠಾನಗೊಳಿಸಬೇಕು. ಪ್ರವರ್ಗ–1ರಡಿ ಬರುವ ಎಲ್ಲಾ ಜಾತಿಗಳ ಕುಲಶಾಸ್ತ್ರ ಅಧ್ಯಯನ ನಡೆಸಲು ₹ 5 ಕೋಟಿ ಮೀಸಲಿಡಬೇಕು. ವಿಶ್ವವಿದ್ಯಾಲಯಗಳಲ್ಲಿ ಪ್ರವರ್ಗ–1ರ ಜಾತಿಗಳ ಕೋಶ ಮರುಸ್ಥಾಪಿಸಬೇಕು. ಶೇ 4ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಶೇ 50ರ ಅನುದಾನದಲ್ಲಿ ನಿವೇಶನ ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಪ್ರವರ್ಗ–1ರ ಜಾತಿಗೆ ಮೀಸಲು ಸ್ಥಾನಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಬೇಕು. ಪ್ರವರ್ಗ–1ರ ನಿಗಮಗಳಿಗೆ 2021–22ನೇ ಸಾಲಿನಲ್ಲಿ ಪ್ರತಿ ನಿಗಮಕ್ಕೆ ₹ 300 ಕೋಟಿ ಒದಗಿಸುವುದು ಸೇರಿದಂತೆ ಅತಿ ಹಿಂದುಳಿದ ಜಾತಿಗಳ 19 ಬೇಡಿಕೆಗಳ ಹಕ್ಕೊತ್ತಾಯಕ್ಕೆ ಸರ್ಕಾರದ ಗಮನ ಸೆಳೆಯುತ್ತೇವೆ’ ಎಂದು ವಿವರಿಸಿದರು.

ಸೌಲಭ್ಯ ಮುಂದುವರಿಸಿ: ‘ಪ್ರವರ್ಗ–1ರಲ್ಲಿ 95 ಸಮುದಾಯಗಳು ಹಾಗೂ 356 ಉಪ ಜಾತಿಗಳಲ್ಲಿ 1 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಈ ವರ್ಗಗಳು ಮುಂದುವರಿದಿವೆ ಎಂಬ ಕಾರಣ ನೀಡಿ 1994ರಲ್ಲಿ ವಿಶೇಷ ಸ್ಥಾನಮಾನ ಹಿಂಪಡೆದಿರುವುದರಿಂದ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಹಿಂದಿನಂತೆಯೇ ಎಲ್ಲಾ ಸೌಲಭ್ಯ ಮುಂದುವರಿಸಬೇಕು’ ಎಂದು ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಬರೀಶ್ ಯಾದವ್ ಕೋರಿದರು.

‘ವಾರ್ಷಿಕ ಆದಾಯ ಮಿತಿ ₹ 1.25 ಲಕ್ಷ ನಿಗದಿಪಡಿಸಿ ಪ್ರವರ್ಗ–1ಕ್ಕೆ ಹಿಂದೆ ನೀಡುತ್ತಿದ್ದ ಸೌಲಭ್ಯಗಳನ್ನು ವಾಪಸ್ ಪಡೆದಿರುವ ಕ್ರಮ ಅವೈಜ್ಞಾನಿಕ. ಸಮುದಾಯದ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿ ಅನುಷ್ಠಾನಗೊಳಿಸಲು ಸಂಬಂಧಪಟ್ಟವರಿಗೆ ಆದೇಶಿಸಬೇಕು’ ಎಂದು ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ಮಂಜುನಾಥ್‌ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು