ಕೋಲಾರ: ಬರೋಬ್ಬರಿ ಐದು ತಿಂಗಳಿಂದ ವೇತನವಿಲ್ಲ, ಮನೆಬಾಡಿಗೆ ಕಟ್ಟಲು ಹಣವಿಲ್ಲ, ಮಕ್ಕಳ ಶಾಲಾ ಶುಲ್ಕ ಇನ್ನೂ ಪಾವತಿಸಿಲ್ಲ; ನಾವು ಕೆಲಸ ಮಾಡುತ್ತಲೇ ಇದ್ದೇವೆ. ಏನಕ್ಕಾಗಿ ಕೆಲಸಕ್ಕೆ ಹೋಗುತ್ತಿದ್ದೀರಿ ಎಂದು ಮನೆಯಲ್ಲಿ ಕೇಳುತ್ತಿದ್ದಾರೆ...
ಕಳೆದ ಐದು ತಿಂಗಳಿನಿಂದ ವೇತನ ಸಿಗದೆ ಸಂಕಷ್ಟಕ್ಕೆ ಒಳಗಾಗಿರುವ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯ ಕ್ರಿಟಿಕಲ್ ಕೇರ್ ಬ್ಲಾಕ್ (ಸಿಸಿಬಿ) ಗುತ್ತಿಗೆ ನೌಕರರ ಅಳಲು ಇದು.
ಸುಮಾರು 60 ಸಿಬ್ಬಂದಿ ಐದು ತಿಂಗಳಿನಿಂದ ವೇತನಕ್ಕೆ ಅಲೆಯುತ್ತಲೇ ಇದ್ದಾರೆ. ಆರೋಗ್ಯ ಸಚಿವರು, ಶಾಸಕರು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಕೊಡುತ್ತಲೇ ಇದ್ದಾರೆ. ಕೊನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೂ ಪತ್ರ ನೀಡಿದ್ದಾರೆ. ಈವರೆಗೆ ವೇತನ ಮಾತ್ರ ಸಿಬ್ಬಂದಿ ಖಾತೆಗೆ ಬಂದಿಲ್ಲ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಯೋಜನೆಯಡಿ ಜನವರಿ ಆರಂಭದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ (ಸಿಸಿಬಿ) ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇಬ್ಬರು ವೈದ್ಯಾಧಿಕಾರಿಗಳು, 47 ನರ್ಸ್‌ಗಳು, ಒಬ್ಬ ಲ್ಯಾಬ್ ಟೆಕ್ನಿಷಿಯನ್, ಒಬ್ಬರು ಫಿಸಿಯೊ ಥೆರಾಪಿಸ್ಟ್ ಹಾಗೂ 9 ಮಂದಿ ಗ್ರೂಪ್ ಡಿ ಸಿಬ್ಬಂದಿ ಸೇರಿದ್ದಾರೆ. ಇವರಲ್ಲಿ ಸುಮಾರು 40 ಮಂದಿ ಮಹಿಳಾ ಸಿಬ್ಬಂದಿಯೇ ಇದ್ದಾರೆ. ಕೆಲವರಿಗೆ ಜನವರಿಯಿಂದಲೂ ವೇತನ ಸಿಕ್ಕಿಲ್ಲ ಎಂಬುದು ಗೊತ್ತಾಗಿದೆ.
ಸಿಕ್ಕಿರುವ ಕೆಲಸವೇನಾದರೂ ಹೋದಿತು ಎಂದು ಕೆಲವರು ವೇತನ ಸಿಗದಿದ್ದರೂ ಸುಮ್ಮನಿದ್ದಾರೆ. ಮುಂದೊಂದು ದಿನ ಸಿಗಬಹುದೆಂಬ ಭರವಸೆ ಅವರದ್ದು.
‘ನಾನು ಕೋಲಾರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ. ಐದು ತಿಂಗಳಿನಿಂದ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡು ಬಾಡಿಗೆ ಮುಂದೂಡಿಕೊಂಡು ಬಂದಿದ್ದೇನೆ. ಅವರೆಷ್ಟು ದಿನ ಅಂತ ಸುಮ್ಮನಿರುತ್ತಾರೆ. ಯಾವ ಕೊಡುತ್ತೀಯಾ ಎಂಬುದಾಗಿ ಕೇಳುತ್ತಿದ್ದಾರೆ’ ಎಂದು ನರ್ಸ್ ಒಬ್ಬರು ‘ಪ್ರಜಾವಾಣಿ’ ಬಳಿ ಸಮಸ್ಯೆ ಹೇಳಿಕೊಂಡರು.
‘ಹಣವಿಲ್ಲದೆ ಹಬ್ಬಗಳನ್ನು ಆಚರಿಸಲೂ ಸಾಧ್ಯವಾಗುತ್ತಿಲ್ಲ. ಯುಗಾದಿ ಮುಗಿಯಿತು, ವರಲಕ್ಷ್ಮಿ ವ್ರತ ಆಯಿತು, ಗೌರಿ ಗಣೇಶ ಹಬ್ಬವೂ ಮುಗಿದು ಈಗ ಆಯುಧ ಪೂಜೆ, ದೀಪಾವಳಿ ಬರುತ್ತಿದೆ. ಇಷ್ಟು ದಿನದ ದುಡಿಮೆಗೆ ನಯಾಪೈಸೆಯೂ ಸಿಕ್ಕಿಲ್ಲ’ ಎಂದು ಮತ್ತೊಬ್ಬ ನರ್ಸ್ ಕಣ್ಣೀರು ಹಾಕಿದರು.
ಕೆಲವರು ಬೇರೆ ಬೇರೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದಲೂ ಬಂದು ನಿತ್ಯ ಕೆಲಸ ಮಾಡುತ್ತಿದ್ದಾರೆ.
‘ನನ್ನ ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಅರ್ಧ ಶುಲ್ಕ ನೀಡಿದ್ದೇನೆ. ಇನ್ನುಳಿದಿದ್ದನ್ನು ವೇತನವಾದ ಮೇಲೆ ನೀಡುವುದಾಗಿ ಹೇಳಿದ್ದೆ. ಆದರೆ, ಈವರೆಗೆ ನನಗೆ ವೇತನವೇ ಆಗಿಲ್ಲ’ ಎಂದು ಗ್ರೂಪ್ ಡಿ ಸಿಬ್ಬಂದಿ ಹೇಳಿದರು.
ರಾಜ್ಯ ಸರ್ಕಾರದ ಕಣ್ಣು ಕಿವಿ ಕೆಲಸ ಮಾಡುತ್ತಿಲ್ಲ. ನೌಕರರಿಗೆ ವೇತನ ಕೊಡಲು ಯೋಗ್ಯತೆ ಇಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎರಡು ಜಾತಿಗೆ ಮೀಸಲಾದ ಜಿಲ್ಲಾಡಳಿತವಿದೆಇಂಚರ ಗೋವಿಂದರಾಜು ವಿಧಾನ ಪರಿಷತ್ ಸದಸ್ಯ ಜೆಡಿಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.