ಕೇಂದ್ರವು ಬಿಜಿಎಂಎಲ್‌ ಕಾರ್ಮಿಕರಿಗೆ ನೆರವು ನೀಡಲಿ

7
ಸಂಸತ್ತಿನ ಶೂನ್ಯ ವೇಳೆಯಲ್ಲಿ ಸಂಸದ ಮುನಿಯಪ್ಪ ಒತ್ತಾಯ

ಕೇಂದ್ರವು ಬಿಜಿಎಂಎಲ್‌ ಕಾರ್ಮಿಕರಿಗೆ ನೆರವು ನೀಡಲಿ

Published:
Updated:

ಕೋಲಾರ: ‘ಜಿಲ್ಲೆಯ ಕೆಜಿಎಫ್‌ನ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ (ಬಿಜಿಎಂಎಲ್‌) ಸ್ಥಗಿತಗೊಂಡ ನಂತರ ಸುಮಾರು 15 ಸಾವಿರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದು, ಕೇಂದ್ರ ಸರ್ಕಾರವು ಈ ಕಾರ್ಮಿಕರ ನೆರವಿಗೆ ಧಾವಿಸಬೇಕು’ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಆಗ್ರಹಿಸಿದರು.

ದೆಹಲಿಯಲ್ಲಿ ಸಂಸತ್ತಿನ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮುನಿಯಪ್ಪ, ‘ಬಿಜಿಎಂಎಲ್‌ 2002ರಲ್ಲಿ ಸ್ಥಗಿತಗೊಂಡಿತು. ಗಣಿಗಾರಿಕೆಯನ್ನೇ ನೆಚ್ಚಿಕೊಂಡಿದ್ದ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗಿವೆ. ಗಣಿ ಕಾರ್ಮಿಕರಿಗೆ ಸಂಪಾದನೆ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಹೇಳಿದರು.

‘ಕಾರ್ಮಿಕರಿಗೆ ಪಾವತಿಸಬೇಕಿದ್ದ ಬಾಕಿ ವೇತನವನ್ನು ಈವರೆಗೂ ಕೊಟ್ಟಿಲ್ಲ. ನಿರಾಶ್ರಿತ ಕಾರ್ಮಿಕರಿಗೆ ಒದಗಿಸಿರುವ ಮನೆಗಳು ತುಂಬಾ ಹಳೆಯವು. ಶಿಥಿಲಾವಸ್ಥೆಯಲ್ಲಿರುವ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. 3 ಸಾವಿರ ಕಾರ್ಮಿಕರಿಗೆ ಮಾತ್ರ ಗುಡಿಸಲು ಮಾದರಿಯ ಮನೆ ಮಂಜೂರು ಮಾಡಲಾಗಿದೆ. 12 ಸಾವಿರ ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸಿಲ್ಲ. ಈ ಕಾರ್ಮಿಕರಿಗೆ ಶೀಘ್ರವೇ ಮನೆ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಗಣಿ ಪ್ರದೇಶದಲ್ಲಿನ ಸುಮಾರು 12 ಸಾವಿರ ಎಕರೆ ಭೂಮಿಯು ಕೇಂದ್ರದ ಸುಪರ್ದಿನಲ್ಲಿದೆ. ನೂತನ ಗಣಿಗಾರಿಕೆ ನೀತಿ ಅನ್ವಯ ಜಿಂಕ್ ಹಾಗೂ ಕಲ್ಲಿದ್ದಲು ಹೊರತುಪಡಿಸಿ ಉಳಿದ ಎಲ್ಲ ಗಣಿಗಾರಿಕೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. 12 ಸಾವಿರ ಎಕರೆ ಭೂಮಿಯನ್ನು ತನ್ನ ಸುಪರ್ದಿಗೆ ಪಡೆಯಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ತಿಳಿಸಿದರು.

‘ಬಿಜಿಎಂಎಲ್‌ ಪ್ರದೇಶದಲ್ಲಿ ರಾಷ್ಟ್ರೀಯ ಹೂಡಿಕೆ ಹಾಗೂ ಉತ್ಪನ್ನ ವಲಯ ನಿರ್ಮಿಸಲು ರಾಜ್ಯ ಸರ್ಕಾರ ಯೋಜಿಸಿದೆ. ಕೇಂದ್ರವು ಭೂಮಿ ಹಸ್ತಾಂತರಿಸಿದರೆ ರಾಜ್ಯ ಸರ್ಕಾರ ಗಣಿಗಾರಿಕೆ ಆರಂಭಿಸುತ್ತದೆ. ಜತೆಗೆ ಕೈಗಾರಿಕೆಗಳನ್ನು ಸ್ಥಾಪಿಸಿ ಕಾರ್ಮಿಕರ ಕುಟುಂಬಗಳಿಗೆ ನೆರವು ನೀಡುತ್ತದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !