ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಜನ ವಿರೋಧಿ ನೀತಿ: ಆರೋಪ

ಪ್ರಧಾನಿ ಮೋದಿಗೆ ಜನರ ಸಮಸ್ಯೆಯ ಅರಿವಿಲ್ಲ: ಧರಣಿನಿರತರ ಆಕ್ರೋಶ
Last Updated 14 ಅಕ್ಟೋಬರ್ 2019, 16:03 IST
ಅಕ್ಷರ ಗಾತ್ರ

ಕೋಲಾರ: ಕೇಂದ್ರ ಸರ್ಕಾರವು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪಿಎಂ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಸದಸ್ಯರು ಇಲ್ಲಿ ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲರಾಗಿದೆ. ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಬಡವರು, ಕಾರ್ಮಿಕರು, ರೈತರು, ಸಣ್ಣ ಉದ್ದಿಮೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ಕೇಂದ್ರವು ಜನವಿರೋಧಿ ನೀತಿ ಅನುಸರಿಸುತ್ತಿದೆ’ ಎಂದು ಕೆಪಿಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಕಿಡಿಕಾರಿದರು.

‘ಕೇಂದ್ರಕ್ಕೆ ರೈತರ, ಸೈನಿಕರ, ಕಾರ್ಮಿಕರ, ಬಡವರ ಹಿತಕ್ಕಿಂತ ವಿದೇಶಿ ಕಂಪನಿಗಳ ಹಾಗೂ ಬಂಡವಾಳಶಾಹಿಗಳ ಹಿತರಕ್ಷಣೆಯೇ ಮುಖ್ಯವಾಗಿದೆ. ಸದಾ ವಿದೇಶ ಪ್ರವಾಸದಲ್ಲಿರುವ ಮೋದಿ ಅವರಿಗೆ ದೇಶದ ಸಮಸ್ಯೆಗಳ ಅರಿವಿಲ್ಲ. ದೇಶದಲ್ಲಿ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಆರ್ಥಿಕ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುತ್ತಿದೆ’ ಎಂದು ಆರೋಪಿಸಿದರು.

ಜನರ ಪಶ್ಚತ್ತಾಪ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟ ಜನ ಈಗ ಪಶ್ಚತ್ತಾಪ ಪಡುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟು ಮತ್ತು ಜನರ ಸಂಕಷ್ಟ ಪರಿಹಾರಕ್ಕೆ ಒತ್ತಾಯಿಸಿ ಎಡ ಪಕ್ಷಗಳು ಸೆ.20ರಂದು ದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶ ನಡೆಸಿ ಜನವಿರೋಧಿ ಆರ್ಥಿಕ ನೀತಿ ಕೈಬಿಡುವಂತೆ ಒತ್ತಾಯಿಸಿದ್ದವು. ಆದರೆ, ಕೇಂದ್ರವು ಒತ್ತಾಯಕ್ಕೆ ಮಣಿದಿಲ್ಲ’ ಎಂದು ಧರಣಿನಿರತರು ದೂರಿದರು.

‘ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಬೇಕು. ರಕ್ಷಣೆ ಮತ್ತು ಕಲ್ಲಿದ್ದಲು ವಲಯದಲ್ಲಿ ಸಂಪೂರ್ಣವಾಗಿ ವಿದೇಶಿ ನೇರ ಬಂಡವಾಳ ವಾಪಸ್ ಪಡೆಯಬೇಕು. ಬಿಎಸ್‍ಎನ್‍ಎಲ್, ರೈಲ್ವೆ, ಏರ್ ಇಂಡಿಯಾ ಮತ್ತು ರಕ್ಷಣಾ ಸಾಮಗ್ರಿ ಉತ್ಪಾದನಾ ಕೈಗಾರಿಕೆಗಳ ಖಾಸಗೀಕರಣ ನಿಲ್ಲಿಸಬೇಕು. ಉದ್ಯೋಗಾವಕಾಶ ಸೃಷ್ಟಿಸಲು ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಸಾಲ ಮನ್ನಾ ಮಾಡಿ: ‘ನರೇಗಾ ಯೋಜನೆಯಡಿ ಉದ್ಯೋಗವನ್ನು ಕನಿಷ್ಠ ವೇತನದೊಂದಿಗೆ 200 ದಿನಗಳಿಗೆ ವಿಸ್ತರಿಸಬೇಕು. ರೈತರನ್ನು ಕೃಷಿ ಬಿಕ್ಕಟ್ಟಿನಿಂದ ಪಾರು ಮಾಡಲು ಸಾಲ ಮನ್ನಾ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖಾತರಿಯಾಗಿ ದೊರೆಯುವಂತೆ ಮಾಡಬೇಕು. ವೃದ್ಧಾಪ್ಯ ಮತ್ತು ವಿಧವಾ ವೇತನ ಹೆಚ್ಚಳ ಮಾಡಬೇಕು’ ಎಂದು ಮನವಿ ಮಾಡಿದರು.

ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿಜಿಕೃಷ್ಣ, ಮುನಿರಾಜಮ್ಮ, ದೇವರಾಜ್, ವಿ.ನಾರಾಯಣರೆಡ್ಡಿ, ಪಿ.ವಿ.ರಮಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT