ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕೆ ಕೇಂದ್ರ ಸಮಾನ ವೇತನ ಜಾರಿ

ನೌಕರರಿಗೆ ಮಾರಕವಾದ ಎನ್‍ಪಿಎಸ್ ರದ್ದು: ಸರ್ಕಾರದ ಮುಖ್ಯ ಸಚೇತಕ ವೈಎಎನ್‌ ಹೇಳಿಕೆ
Last Updated 12 ಮೇ 2022, 13:18 IST
ಅಕ್ಷರ ಗಾತ್ರ

ಕೋಲಾರ: ‘ಡಿಸೆಂಬರ್‌ ಅಂತ್ಯದೊಳಗೆ ಕೇಂದ್ರ ಸಮಾನ ವೇತನ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ನೂತನ ಪಿಂಚಣಿ ಯೋಜನೆ (‌ಎನ್‍ಪಿಎಸ್) ರದ್ಧತಿಗೂ ಸರ್ಕಾರ ಬದ್ಧವಾಗಿದ್ದು, ಈ ಕಾರ್ಯ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಗುರುವಾರ ಆರಂಭವಾದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮಾತನಾಡಿ, ‘ಬಿಜೆಪಿ ಸರ್ಕಾರವೇ 5 ಮತ್ತು 6ನೇ ವೇತನ ಆಯೋಗ ನೀಡಿದೆ.ನೌಕರರ ಹಿತ ಕಾಯುವ ಶಕ್ತಿ ಬಿಜೆಪಿಗೆ ಮಾತ್ರವಿದೆ. ನೌಕರರ ಬಹುದಿನದ ಬೇಡಿಕೆಯಾದ ಕೇಂದ್ರ ಸಮಾನ ವೇತನ ಜಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ಸರ್ಕಾರ ಸಿದ್ಧವಾಗಿದ್ದು, ಈ ವರ್ಷದ ಅಂತ್ಯದೊಳಗೆ ಜಾರಿ ಶತಸಿದ್ಧ’ ಎಂದು ಘೋಷಿಸಿದರು.

‘ನೌಕರರಿಗೆ ಮಾರಕವಾಗಿರುವ ಎನ್‍ಪಿಎಸ್ ರದ್ದುಗೊಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಈ ಘೋಷಣೆ ಜಾರಿ ನಿಶ್ಚಿತ. ಈ ಕಾರ್ಯಕ್ಕಾಗಿ ಸಮಿತಿ ರಚಿಸಲಾಗಿದೆ. ಹಳೆ ಪಿಂಚಣಿ ಜಾರಿಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರಿ ನೌಕರರಲ್ಲಿ ಶೇ 80ರಷ್ಟು ಶಿಕ್ಷಕರೇ ಇದ್ದಾರೆ. ಈ ನೌಕರರ ಶೇ 100ರಷ್ಟು ಬೇಡಿಕೆ ಈಡೇರಿಸಿರುವುದು ಬಿಜೆಪಿ ಸರ್ಕಾರವೇ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವ ನೌಕರರ ಹಿತ ರಕ್ಷಣೆಗೆ ನಾವು ಬದ್ಧ’ ಎಂದು ಭರವಸೆ ನೀಡಿದರು.

ಡೈನಮಿಕ್‌ ಅಧಿಕಾರಿಗಳು: ‘ನೌಕರರಲ್ಲಿ ಗುಂಪುಗಾರಿಕೆ ಹೋಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂವರೂ ಡೈನಮಿಕ್ ಅಧಿಕಾರಿಗಳು. ಇಂತಹ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿದೆ. ಎಲ್ಲರೂ ಒಗ್ಗೂಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ನೀರಿಲ್ಲದ ಈ ನೆಲದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ನೌಕರರ ಭವನಕ್ಕೆ ಮೀಸಲಿಟ್ಟಿರುವ 5 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಶೀಘ್ರವೇ ಮಂಜೂರು ಮಾಡಬೇಕು. ಹಳೆ ನೌಕರರ ಭವನ ಕೆಡವಿ, ಹೊಸ ಭವನ ನಿರ್ಮಿಸಬೇಕು. ಈ ಕೆಲಸ ತ್ವರಿತವಾಗಿ ಆಗಬೇಕು. ರಾಜ್ಯವು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ದೇಶದಲ್ಲೇ ಮೊದಲ ಬಾರಿಗೆ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಸುತ್ತಿದ್ದೇವೆ. ಇದಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT