ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಣ್ಣ ವಾಲೀಕಾರ ದಲಿತರ– ಶೋಷಿತರ ಧ್ವನಿ

ಶ್ರದ್ಧಾಂಜಲಿ ಸಭೆಯಲ್ಲಿ ಕವಿ ಶರಣಪ್ಪ ಗಬ್ಬೂರು ಸ್ಮರಣೆ
Last Updated 25 ನವೆಂಬರ್ 2019, 14:53 IST
ಅಕ್ಷರ ಗಾತ್ರ

ಕೋಲಾರ: ‘ಸಾಹಿತಿ ಚನ್ನಣ್ಣ ವಾಲೀಕಾರ ಅವರು ಯುವ ಬರಹಗಾರರಿಗೆ ಆದರ್ಶಪ್ರಾಯರಾಗಿದ್ದರು’ ಎಂದು ಕವಿ ಶರಣಪ್ಪ ಗಬ್ಬೂರು ಸ್ಮರಿಸಿದರು.

ಚನ್ನಣ್ಣ ವಾಲೀಕಾರ ಅವರ ನಿಧನದ ಹಿನ್ನೆಲೆಯಲ್ಲಿ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ‘ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಸಾಹಿತ್ಯ ರಚನೆ ಮಾಡಿದ ಚನ್ನಣ್ಣ ಮಾಲೀಕರ ಅವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

‘ಶಿಕ್ಷಕರಾಗಿ ವೃತ್ತಿ ಬದುಕು ಆರಂಭಿಸಿದ ಚನ್ನಣ್ಣ ವಾಲೀಕಾರ ಬಂಡಾಯ ಸಾಹಿತ್ಯದ ಮೂಲಕ ಮನೆ ಮಾತಾಗಿದ್ದರು. ಸಾಹಿತಿಯಾಗಿ, ಕವಿಯಾಗಿ, ನಾಟಕಕಾರರಾಗಿ, ಶಿಕ್ಷಕರಾಗಿ, ಉಪನ್ಯಾಸಕರಾಗಿ ದಲಿತರ ನೋವಿಗೆ ಸಾಹಿತ್ಯದ ಮೂಲಕ ಸ್ಪಂದಿಸಿದರು. ಹಳ್ಳಿಗಳಲ್ಲಿನ ವಾಸ್ತವ ಪರಿಸ್ಥಿತಿ ಹಾಗೂ ಜೀವನ ಆಧಾರಿತ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು’ ಎಂದು ಅಭಿಪ್ರಾಯಪಟ್ಟರು.

‘ಅಕ್ರಮ ಕಂಡರೆ ತಕ್ಷಣ ಪ್ರತಿಭಟಿಸುವ ಪ್ರವೃತ್ತಿ ಅವರದಾಗಿತ್ತು. ಜನಪರ ಚಳವಳಿಗಳಲ್ಲಿ ಪಾಲ್ಗೊಂಡು ಬಡತನ, ಜಾತಿ ನಿರ್ಮೂಲನೆ ಹೋರಾಟಕ್ಕೆ ನಿಂತು ಬಂಡಾಯ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ ಮೂಲೆ ಮೂಲೆಯಲ್ಲೂ ಅವರ ಶಿಷ್ಯ ವೃಂದ ಹಾಗೂ ಓದುಗ ಅಭಿಮಾನಿ ಬಳಗವಿದೆ’ ಎಂದು ಹೇಳಿದರು.

ಬಹುಮುಖಿ ಪ್ರತಿಭೆ: ‘ಯುವ ಬರಹಗಾರರು ಚನ್ನಣ್ಣ ವಾಲೀಕಾರರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಬರಹಗಾರಾಗಿ ರೂಪುಗೊಳ್ಳಬಹುದು’ ಎಂದು ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವೆಂಕಟಾಚಲಪತಿ ಅಭಿಪ್ರಾಯಪಟ್ಟರು.

‘ನಾಡಿನ ಜನರ ಸಮಸ್ಯೆ ಗುರುತಿಸಿ ಆ ಸಮಸ್ಯೆಗಳ ಆಧಾರದಲ್ಲಿ ಸಾಹಿತ್ಯ ರಚನೆ ಮಾಡಿದರು. ಹೋರಾಟ ರೂಪಿಸಿ ತಾವು ಭಾಗಿಯಾದ ಬರಗೂರು ರಾಮಚಂದ್ರಪ್ಪ, ಪಾಟೀಲ್ ಪುಟ್ಟಪ್ಪ ಅವರಂತಹ ಮೂಂಚೂಣಿ ಸಾಹಿತಿಗಳ ಸಾಲಿನಲ್ಲಿ ವಾಲೀಕಾರರನ್ನು ನೋಡಬೇಕಾಗಿದೆ’ ಎಂದರು.

‘ವಾಲೀಕಾರ ಅವರು ದಲಿತರ ಹಾಗೂ ಶೋಷಿತರ ಪರವಾದ ಕಲ್ಯಾಣ ನಾಡಿನ ಪ್ರಮುಖ ಸಾಹಿತಿಯಾಗಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮಹಾಕಾವ್ಯ, ಕವನ ಸಂಕಲನ, ಕಥಾ ಸಂಕಲನ, ರಂಗಭೂಮಿ, ಜನಪದ, ಪ್ರಬಂಧ, ನಾಟಕ, ನಟನೆ, ನಿರ್ದೇಶನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದುಡಿದ ವಾಲೀಕಾರರು ಬಹುಮುಖಿ ಪ್ರತಿಭೆ’ ಎಂದು ಬಣ್ಣಿಸಿದರು.

ಕಲಾವಿದರಾದ ಯಲ್ಲಪ್ಪ, ಮುನಿರಾಜು, ಎನ್.ಪ್ರಭಾ, ದಿನೇಶ್, ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT