ರಾಜಕಾಲುವೆ ಒತ್ತುವರಿ ಆರೋಪ: ಧರಣಿ

7

ರಾಜಕಾಲುವೆ ಒತ್ತುವರಿ ಆರೋಪ: ಧರಣಿ

Published:
Updated:
Deccan Herald

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುಣಸನಹಳ್ಳಿ ಸಮೀಪ ರಾಜಕಾಲುವೆ ಒತ್ತುವರಿ ಮಾಡಿರುವ ಆಶ್ಲೆ ಇಂಟರ್ ನ್ಯಾಷನಲ್ ಶಾಲೆ ಮುಖ್ಯಸ್ಥ ಮುನೇಗೌಡ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ದಲಿತ ರೈತ ಸೇನೆ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

‘ಮುನೇಗೌಡ ಅವರು ಶಾಲಾ ಕಟ್ಟಡಕ್ಕಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಅಕ್ರಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಕಂದಾಯ ಅಧಿಕಾರಿಗಳು ಕೆರೆ ನೀರು ಮುಳುಗಡೆ ಪ್ರದೇಶದ 20 ಗುಂಟೆ ಜಮೀನನ್ನು ಶಾಲೆ ನಿರ್ಮಾಣಕ್ಕಾಗಿ ಮುನೇಗೌಡ ಅವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ರಾಜಕಾಲುವೆ ಒತ್ತುವರಿಯಿಂದ ಮಳೆಗಾಲದಲ್ಲಿ ಶಾಲೆಯ ಸುತ್ತಮುತ್ತಲ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ’ ಎಂದು ಸಂಘಟನೆ ಸಂಸ್ಥಾಪಕ ಎನ್.ವೆಂಕಟೇಶ್‌ ಹೇಳಿದರು.

‘ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳನ್ನು ಭೂಗಳ್ಳರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಜಿಲ್ಲಾಧಿಕಾರಿಯು ಈ ಬಗ್ಗೆ ಗಮನಹರಿಸಿ ಜಮೀನುಗಳ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿದಾರರ ಹಾಗೂ ಅವರಿಗೆ ನೆರವಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ರಾಜಪ್ಪ, ರಮೇಶ್, ಮಂಜುಳಾ, ಸಿ.ಸತೀಶ್, ಶ್ರೀನಿವಾಸಪ್ಪ, ಜಿ.ಪ್ರಸಾದ್, ಆರ್.ಎಂ.ನವೀನ್‌ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !