ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಾಗ ಸರ್ವೇ ಮಾಡಲು ಎದೆ ನೋವು: ಎಸ್.ಮುನಿಸ್ವಾಮಿ ಆಕ್ರೋಶ

ಪ್ರಗತಿ ಪರಿಶೀಲನಾ ಸಭೆ
Last Updated 18 ಜನವರಿ 2020, 14:24 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಿ ಜಾಗವನ್ನು ಸರ್ವೇ ಮಾಡಬೇಕಾದರೆ ಸರ್ವೇ ಅಧಿಕಾರಿಗಳಿಗೆ ಎದೆ ನೋವು ಬರುತ್ತದೆ, ಇವರಿಗೆ ಕಾನೂನಡಿ ಕೆಲಸ ಮಾಡಿ ಎಂದರೂ ಅಗೊದಿಲ್ಲೆನೊ’ ಎಂದು ಸಂಸದ ಎಸ್.ಮುನಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿಯಿಂದ (ದಿಶಾ) ಇಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಮೀನುಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ ಹೊರತು ನಿವಾರಣೆಯಾಗುತ್ತಿಲ್ಲ. ಜನ ಕಚೇರಿಗಳಿಗೆ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದರೆ ಏನು ಅರ್ಥ’ ಎಂದು ಪ್ರಶ್ನಿಸಿದರು.

‘ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಜಾಗಗಳನ್ನು ಖಾಸಗಿಯರಿಗೆ ಖಾತೆ ಮಾಡಿಕೊಟ್ಟಿರುವ ಹಾಗೂ ವಿಷಯ ಸಾಬೀತಾಗಿ ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮಕ್ಕೆ ಮುಂದಾದಾಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನಪ್ರತಿನಿಗಳು ಒತ್ತಡ ಹಾಕಿದರೂ ಅಧಿಕಾರಿಗಳು ಕಾನೂನು ಮೀರಿ ಕೆಲಸ ಮಾಡಬಾರದು’ ಎಂದು ಸಲಹೆ ನೀಡಿದರು.

‘ಪಂಚಾಯಿತಿ ಕಚೇರಿಗಳಲ್ಲಿ ಇ ಖಾತೆ ಮಾಡಿಕೊಡಲು ತಡಮಾಡಲಾಗುತ್ತಿದೆ’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ ಸಭೆಯ ಗಮನಕ್ಕೆ ತಂದರು.

ಪರಿಸ್ಥಿತಿ ಸರಿ ಹೋಗಬೇಕು: ಇದಕ್ಕೆ ಮಧ್ಯ ಪ್ರವೇಶ ಮಾಡಿದ ಸಂಸದ ಮುನಿಸ್ವಾಮಿ, ‘ಖಾತೆ ಮಾಡಿಕೊಡುವುದು ಎಂದರೆ ಆಟ ಅಡುವುದು ಅಂದುಕೊಂಡಿದ್ದಾರೆ. ಕಂದಾಯ ಜಮೀನಿಗೂ ಫಾರಂ 9,10 ಕೊಟ್ಟಿರುವ ನಿದರ್ಶನಗಳಿವೆ. ಈ ಪರಿಸ್ಥಿತಿ ಸರಿ ಹೋಗಬೇಕು’ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಕಾನೂನು ಮೀರಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳುವುದಿಲ್ಲ. ಕಾನೂನು ಮೀರಿ ಕೆಲಸ ಮಾಡಿದರೆ ಮುದೊಂದು ದಿನ ತೊಂದರೆ ಎದುರಿಸಬೇಕಾಗುತ್ತದೆ. ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಜನ ಗೌರವಿಸುತ್ತಾರೆ. ನೀವು ಹೇಳುವ ನಂಬರ್ ಕೇಳಿಕೊಂಡು ಹೋಗಲು ಬಂದಿಲ್ಲ. ಕೇಂದ್ರ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು’ ಎಂದು ತಾಕೀತು ಮಾಡಿದರು.

ಕುಡಿಯುವ ನೀರಿನ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಎಂಜನಿಯರ್‌ ಸಮರ್ಪಕವಾಗಿ ಮಾಹಿತಿ ನೀಡಲು ತಡಬಡಾಯಿಸುತ್ತಾ, ಜಿಲ್ಲೆಯಲ್ಲಿ ೧೦೯೯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ೨೯ ಘಟಕಗಳು ಹೊರತುಪಡಿಸಿ ಎಲ್ಲ ಘಟಕಗಳು ಕೆಲಸ ಮಾಡುತ್ತಿವೆ. ಕೆಟ್ಟಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಸಂಸದ ಮುನಿಸ್ವಾಮಿ ಮಾತನಾಡಿ, ‘ನನಗೆ ಹಳ್ಳಿ ಮಟ್ಟದಿಂದ ಮಾಹಿತಿ ಬೇಕು. ನಾನೇನು ಕಮೀಷನ್ ರಾಜಕಾರಣಿಯಲ್ಲ. ಜನರ ಕೊಟ್ಟಿರುವ ಅವಕಾಶ ದುರುಪಯೋಗಪಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನಾವು ಟ್ಯಾಂಕರ್ ಹಾವಳಿ ತಡೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ, ನೀವು ಟ್ಯಾಂಕರ್ ಹಾವಳಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೀರಾ’ ಎಂದು ತರಾಟೆಗೆ ತೆಗೆದುಕೊಂಡರು.

ಪಿಂಚಣಿ ಹಣ ಸಾಲಕ್ಕೆ ಜಮೆ ಮಾಡಿಕೊಳ್ಳಬೇಡಿ: ‘ಹಿರಿಯ ನಾಗರಿಕರು ಪಡೆದಿರುವ ಸಾಲಕ್ಕೆ ಅವರ ಪಿಂಚಣಿ ಹಣವನ್ನು ಜಮೆ ಮಾಡಿಕೊಂಡರೆ ಅಂತಹ ಅಕಾರಿಗಳನ್ನು ಅಮಾನತುಗೊಳಿಸಲಾಗುವುದು. ಬ್ಯಾಂಕ್‌ಗಳು ಯಾವುದೇ ಕಾರಣಕ್ಕೂ ಹಿರಿಯ ನಾಗರಿಕರು ಸೇರಿದಂತೆ ಇತರೆ ರೀತಿಯ ಪಿಂಚಣಿ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು’ ಎಂದು ಸೂಚಿಸಿದರು.

ಇದೇ ವೇಳೆ ಆರೋಗ್ಯ ಇಲಾಖೆಯಲ್ಲಿರುವ ಅವ್ಯವಸ್ಥೆಗಳ ಬಗ್ಗೆ ಅಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಜಿಲ್ಲೆಯಲ್ಲಿನ ೪೦ ಸಾವಿರ ವಿಕಲಚೇತನರಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷದಿಂದಾಗಿ ವಿಕಲಚೇತನ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ವಿಷಾದಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಉಪಾಧ್ಯಕ್ಷೆ ಯಶೋಧಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT