ಮಂಗಳವಾರ, ನವೆಂಬರ್ 19, 2019
25 °C

ಮಕ್ಕಳ ಸಾವು ಪ್ರಕರಣ: ತನಿಖೆಗೆ ಸೂಚನೆ

Published:
Updated:

ಕೋಲಾರ: ‘ಕೆಜಿಎಫ್‌ ತಾಲ್ಲೂಕಿನ ಮರದಘಟ್ಟ ಗ್ರಾಮದ ಕೆರೆಯ ಕುಂಟೆಯಲ್ಲಿ ಮಕ್ಕಳು ಮೃತಪಟ್ಟ ಪ್ರಕರಣ ಸಂಬಂಧ ಕಂದಾಯ ಮತ್ತು ಪೊಲೀಸ್‌ ಅಧಿಕಾರಿಗಳ ಲೋಪದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮರದಘಟ್ಟ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮರಳು ಹಾಗೂ ಮಣ್ಣು ತೆಗೆಯುವುದನ್ನು ಸಂಬಂಧಪಟ್ಟ ಅಧಿಕಾರಿಗಳು ತಡೆದಿದ್ದರೆ ಮಕ್ಕಳ ಸಾವಿನ ದುರಂತ ಸಂಭವಿಸುತ್ತಿರಲಿಲ್ಲ. ಮರಳು ದಂಧೆಕೋರರು ಕೆರೆಯಲ್ಲಿ ಮಾಡಿದ್ದ ಗುಂಡಿಗಳಿಂದ ಈ ದುರ್ಘಟನೆ ನಡೆದಿದೆ’ ಎಂದರು.

‘ಮರದಘಟ್ಟ ಕೆರೆಯ ಕುಂಟೆಯಲ್ಲಿ ಮುಳುಗಿ ಮೃತಪಟ್ಟಿರುವ ಮಕ್ಕಳ ಕುಟುಂಬಕ್ಕೆ ಪರಿಹಾರ ಕಲ್ಪಿಸಲಾಗುವುದು. ಪರಿಶಿಷ್ಟ ಮಕ್ಕಳ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 4.50 ಲಕ್ಷ ಪರಿಹಾರ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಎಷ್ಟೇ ಪರಿಹಾರ ಕೊಟ್ಟರೂ ಹೋದ ಜೀವ ಬರುವುದಿಲ್ಲ, ತೀರ ಬಡವರಿರುವ ಕುಟುಂಬಕ್ಕೆ ಅಂಗನವಾಡಿ ಅಥವಾ ಇತರೆ ಕಡೆ ಕೆಲಸ ಕೊಡಿಸುತ್ತೇವೆ. ಘಟನಾ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿದಾಗ ಆಂಬುಲೆನ್ಸ್‌ ಸೇವೆ ಲಭ್ಯವಾಗದ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ಕರ್ತವ್ಯ ಲೋಪ ಎಸಗಿರುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೂ ತಿಳಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯ ಹಲವು ಕೆರೆಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ದಂಧೆಗೆ ಕಡಿವಾಣ ಹಾಕಲು ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು.

ಹೋರಾಟ ಸರಿಯಲ್ಲ: ‘ಎಲ್ಲಾ ಸಮುದಾಯದವರು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಬೇಕು. ಒಂದು ಸಮುದಾಯ ವ್ಯಕ್ತಿಪರವಾಗಿ ಹೋರಾಟ ಮಾಡುವುದು ತಪ್ಪು. ಈ ಹಿಂದೆ ಕಾಂಗ್ರೆಸ್ ಹಾಗೂ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದಾಗ ಆದಾಯ ತೆರಿಗೆ ಇಲಾಖೆ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ದಾಳಿಗಳು ನಡೆದಿವೆ. ಒಕ್ಕಲಿಗ ಸಮುದಾಯದವರು ಡಿ.ಕೆ.ಶಿವಕುಮಾರ್‌ ಬಂಧನ ಸಂಬಂಧ ಜಾತಿ ವಿಚಾರ ಮುಂದಿಟ್ಟುಕೊಂಡು ಹೋರಾಟ ನಡೆಸಿರುವುದು ಸರಿಯಲ್ಲ’ ಎಂದು ದೂರಿದರು.

ಪ್ರತಿಕ್ರಿಯಿಸಿ (+)