ಶನಿವಾರ, ಫೆಬ್ರವರಿ 27, 2021
31 °C
ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ

ಬಾಲ ಕಾರ್ಮಿಕರನ್ನು ರಕ್ಷಿಸಿ ಮುಖ್ಯವಾಹಿನಿಗೆ ತನ್ನಿ: ಜಿಲ್ಲಾಧಿಕಾರಿ ಮಂಜುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಕಾರ್ಮಿಕ ಕಾಯ್ದೆ ಪ್ರಕಾರ ತಳ ಮಟ್ಟದಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಪೂರ್ಣ ಚಿತ್ರಣ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಬಾಲಕಾರ್ಮಿಕ ಯೋಜನೆ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕಾರ್ಮಿಕ ಇಲಾಖೆ ಅಧಿಕಾರಿಗಳು ಮೊದಲು ಇಲಾಖೆ ಮಾರ್ಗಸೂಚಿ ಅನ್ವಯ ಬಾಲ ಕಾರ್ಮಿಕರ ವಿವರ ಸಂಗ್ರಹಿಸಬೇಕು. ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ವರದಿ ಪಡೆದು ಬಾಲ ಕಾರ್ಮಿಕರನ್ನು ರಕ್ಷಿಸಿ ಮುಖ್ಯವಾಹಿನಿಗೆ ತರಬೇಕು’ ಎಂದರು.

‘ಹಿಂದಿನ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶಾಲಾ ರಜೆ ಅವಧಿಯಲ್ಲಿ ಬ್ರಿಜ್ಡ್ ತರಬೇತಿ ನೀಡಲಾಗಿತ್ತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಸಿ.ಅರ್.ಅಶೋಕ್ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸಭೆಗೆ ಈ ವರ್ಷದ ಬ್ರಿಜ್ಡ್ ಕೋರ್ಸ್‌ ಬಗ್ಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಸಮಯ ವ್ಯರ್ಥ ಮಾಡಲು ಸಭೆಗೆ ಬರುತ್ತೀರಾ?’ ಎಂದು ಪ್ರಶ್ನಿಸಿದರು.

ತರಬೇತಿ ನೀಡಿ: ‘ಜಿಲ್ಲೆಯಲ್ಲಿ 14 ವರ್ಷದಿಂದ 18 ವರ್ಷ ವಯೋಮಾನದ ಬಾಲ ಕಾರ್ಮಿಕರನ್ನು ಗುರುತಿಸಿ ಪ್ರಧಾನಮಂತ್ರಿ ಕೌಶಲ ತರಬೇತಿ ಕೇಂದ್ರ ಹಾಗೂ ಗ್ರಾಮೀಣ ಕೌಶಲ ಯೋಜನೆಯಡಿ ತರಬೇತಿ ನೀಡಬೇಕು. ಹೊಲಿಗೆ, ಮೊಬೈಲ್ ರಿಪೇರಿ, ಹೈನುಗಾರಿಕೆ, ಕೊಳಾಯಿ ರಿಪೇರಿ, ಎಲೆಕ್ಟ್ರಿಷಿಯನ್ ಕೆಲಸದ ತರಬೇತಿ ನೀಡುವ ಮೂಲಕ ಬಾಲ ಕಾರ್ಮಿಕರಿಗೆ ಜೀವನ ರೂಪಿಸಿಕೊಳ್ಳಲು ಸಹಕರಿಸಿ’ ಎಂದು ಸೂಚಿಸಿದರು.

ಗೋಡೆ ಬರಹ: ‘ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆಗಾಗಿ ಜಿಲ್ಲೆಯ 80 ಕಡೆ ಗೋಡೆ ಬರಹ ಬರೆಸಲಾಗಿದೆ. ಜತೆಗೆ 50 ಸ್ಥಳಗಳಲ್ಲಿ ಸ್ಟಿಕ್ಕರ್‌ ಅಂಟಿಸಲಾಗಿದೆ. 20 ಸಾವಿರ ಕರಪತ್ರ ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಂಚಲಾಗಿದೆ. ಜತೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕಾರ್ಮಿಕ ಇಲಾಖೆ ಜಿಲ್ಲಾ ಯೋಜನಾಧಿಕಾರಿ ಲಕ್ಷ್ಮೀನಾರಾಯಣ್ ಮಾಹಿತಿ ನೀಡಿದರು.

ದಂಡ ವಿಧಿಸಲಾಗಿದೆ: ‘ಬಾಲಕಾರ್ಮಿಕ ಪದ್ಧತಿ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜಾಗೃತಿ ಕಾರ್ಯಾಗಾರ ನಡೆಸಲಾಗಿದೆ. ಇಟ್ಟಿಗೆ ಕಾರ್ಖಾನೆ, ಗ್ಯಾರೇಜ್‌, ಪಾನಿಪೂರಿ ಅಂಗಡಿ, ಹೋಟೆಲ್‌ಗಳು ಸೇರಿದಂತೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಮಾಲೀಕರ ವಿರುದ್ಧ 17 ಪ್ರಕರಣ ದಾಖಲಿಸಿ ಸುಮಾರು ₹ 80 ಸಾವಿರ ದಂಡ ವಿಧಿಸಲಾಗಿದೆ’ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎ.ಬಿ.ರಾಜೇಂದ್ರಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ನಿರಂಜನ್ ಹಾಜರಿದ್ದರು.

ಅಂಕಿ ಅಂಶ.....
* 17 ಮಾಲೀಕರ ವಿರುದ್ಧ ಪ್ರಕರಣ ದಾಖಲು
* ₹ 80 ಸಾವಿರ ದಂಡ ವಿಧಿಸಲಾಗಿದೆ
* 80 ಕಡೆ ಗೋಡೆ ಬರಹ ಬರೆಸಲಾಗಿದೆ
* 20 ಸಾವಿರ ಕರಪತ್ರ ಮುದ್ರಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು