ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ: ಮಕ್ಕಳ ಭವಿಷ್ಯ ಹಾಳು

ಕಾರ್ಯಾಗಾರದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಅಭಿಪ್ರಾಯ
Last Updated 25 ಸೆಪ್ಟೆಂಬರ್ 2020, 14:35 IST
ಅಕ್ಷರ ಗಾತ್ರ

ಕೋಲಾರ: ‘ಬಾಲ್ಯವಿವಾಹ ತಡೆಗೆ ಮನೆಯಿಂದಲೇ ಪ್ರಯತ್ನ ಆರಂಭವಾಗಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಕಲೆಕ್ಟಿವ್ ಆ್ಯಕ್ಷನ್ ನೆಟ್‌ವರ್ಕ್‌ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ ಕುರಿತು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

‘ದೇಶದಲ್ಲಿ ಇಂದಿಗೂ ಬಾಲ್ಯವಿವಾಹ ಪದ್ಧತಿ ಆಚರಣೆಯಲ್ಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬ ಪರಿಕಲ್ಪನೆ ಪೋಷಕರಿಗೆ ಇಲ್ಲವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರ ಗ್ರಾಮೀಣ ಪ್ರದೇಶದಿಂದ ರಾಜ್ಯ ಮಟ್ಟದವರೆಗೆ ಬಾಲ್ಯವಿವಾಹ ನಿಷೇಧ ಜಾರಿ ಅಧಿಕಾರಿಗಳನ್ನು ನಿಯೋಜಿಸಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯು ಪ್ರತಿ ಜಾತಿ ಧರ್ಮಕ್ಕೆ ಅನ್ವಯಿಸುತ್ತದೆ. ಬಾಲ್ಯವಿವಾಹ ನಿಯಂತ್ರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ’ ಎಂದು ಕಿವಿಮಾತು ಹೇಳಿದರು.

‘ಮದುವೆ ಆಗುವ ಯುವತಿಗೆ 18 ವರ್ಷ ಮತ್ತು ಯುವಕನಿಗೆ 21 ವರ್ಷ ಪೂರ್ಣಗೊಂಡಿರಬೇಕು. ಬಾಲ್ಯವಿವಾಹವು ಸಾಮಾಜಿಕವಾಗಿ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯಾದರೆ ಹೆರಿಗೆ ಸಂದರ್ಭದಲ್ಲಿ ಪ್ರಾಣ ಹಾನಿ, ಮಗುವಿಗೆ ಅಂಗವಿಕಲತೆ, ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ’ ಎಂದರು.

ಶಿಕ್ಷಣ ಪಡೆಯಿರಿ: ‘ಸಾಮೂಹಿಕ ವಿವಾಹಗಳಲ್ಲಿ ಅನೇಕ ಬಾಲ್ಯವಿವಾಹಗಳು ಕಾನೂನಿನ ಕಣ್ತಪ್ಪಿಸಿ ಆಗುತ್ತಿವೆ. ಪೋಷಕರಿಗೆ ಕಾನೂನಿನ ಅರಿವು ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ಸಾಮಾಜಿಕ ಅಜ್ಞಾನದಿಂದ ಬಾಲ್ಯವಿವಾಹದಂತಹ ಅಚಾತುರ್ಯ ನಡೆಯುತ್ತಿವೆ. ಆದ ಕಾರಣ ಪ್ರತಿಯೊಬ್ಬರು ಕನಿಷ್ಠ ಶಿಕ್ಷಣ ಪಡೆಯಲೇಬೇಕು. ಇದು ವಲಸೆ ಕಾರ್ಮಿಕರಿಗೂ ಅನ್ವಯಿಸುತ್ತದೆ’ ಎಂದು ತಿಳಿಸಿದರು.

‘ಬಾಲ್ಯವಿವಾಹ ತಡೆಗೆ ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂದಾಗಬೇಕು. ಮಕ್ಕಳಿಗೆ ಮದುವೆ ಮಾಡುತ್ತಿರುವ ಸಂಗತಿ ತಿಳಿದರೆ ಆ ಬಗ್ಗೆ ಕೂಡಲೇ ಪೊಲೀಸರಿಗೆ ಅಥವಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಜತೆಗೆ ಬಾಲ್ಯವಿವಾಹ ಮಾಡದಂತೆ ನೆರೆಹೊರೆಯವರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಮನ್ವಯ ಕೊರತೆ: ‘ಕೋವಿಡ್‌–19 ಸಂದರ್ಭದಲ್ಲಿ ಜಿಲ್ಲೆಯಲ್ಲಿ 61 ಬಾಲ್ಯವಿವಾಹಕ್ಕೆ ಪ್ರಯತ್ನ ನಡೆದಿರುವುದು ಕಳವಳಕಾರಿ. ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಈ ಅಚಾತುರ್ಯ ನಡೆದಿರಬಹುದು. ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿದ್ದರೆ ಇಷ್ಟೊಂದು ಪ್ರಕರಣ ಸಂಭವಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಅಭಿಪ್ರಾಯಪಟ್ಟರು.

‘ಬಾಲ್ಯವಿವಾಹ ನಿಷೇಧ ಕಾನೂನು ಜಾರಿಗಾಗಿ ಸಮಿತಿ ರಚಿಸಲಾಗಿದೆ. ಸಾರ್ವಜನಿಕರು ಈ ಸಮಿತಿ ಸದಸ್ಯರಿಗೆ ಮಾಹಿತಿ ನೀಡಬಹುದು ಅಥವಾ ಅಗತ್ಯವಿದ್ದಲ್ಲಿ ಪೊಲೀಸರ ನೆರವು ಪಡೆಯಬಹುದು. ಬಾಲ್ಯವಿವಾಹಕ್ಕೆ ಕಡಿವಾಣ ಹಾಕುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿರುವುದು ಶ್ಲಾಘನೀಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಚೈಲ್ಡ್ ರೈಟ್ಸ್‌ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ಎನ್.ವಿ.ವಾಸುದೇವಶರ್ಮಾ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ರಮೇಶ್, ಗ್ರಾಮ ವಿಕಾಸ್ ಸಂಸ್ಥೆ ನಿರ್ದೇಶಕ ಎಂ.ವಿ.ರಾವ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT