ಮಂಗಳವಾರ, ಜನವರಿ 28, 2020
21 °C

ಕೋಲಾರ: ಮಕ್ಕಳ ಸಂತೆಯಲ್ಲಿ ವ್ಯಾಪಾರ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪೈಪೋಟಿ ನಡೆಸಿದರು.

ಬನ್ನೀ ಅಣ್ಣಾ ಬನ್ನೀ, ಅಕ್ಕ ನ್ನೀ, ಬನ್ನೀ ಸಾರ್ ಬನ್ನೀ... ಎಂದು ಕೂಗುತ್ತಾ ವಿದ್ಯಾರ್ಥಿಗಳು ತಂದಿರುವ ತರಕಾರಿ, ತಿಂಡಿಗಳನ್ನು ಪ್ರದರ್ಶಿಸಿ ಆಕರ್ಷಿಸಿ, ಮಾರಾಟ ಮಾಡಿದರು.

ನಮ್ಮತ್ರ ತಾಜಾ ತರಕಾರಿ ಇದೆ ಬನ್ನಿ, ಟೊಮೆಟೊ ಇದೆ. ಮೂಲಂಗಿ, ಕ್ಯಾರೇಟ್, ಅವರೆಕಾಯಿ, ಕೊತ್ತಂಬರಿಸೊಪ್ಪು, ಮೆಂತ್ಯಾ ಸೊಪ್ಪು, ದಂಟಿನಸೊಪ್ಪು, ಸಪ್ಸೀಗೆ ಸೊಪ್ಪು ತಗೊಳ್ಳಿ ಎಂದು ಕೂಗು ಹಾಕಿ ಪೈಪೋಟಿಯ ಮೇಲೆ ಗ್ರಾಹಕರನ್ನು ಕರೆದು ಭರ್ಜರಿ ವ್ಯಾಪಾರ ಮಾಡಿದರು. ಇದರ ಜತೆಗೆ ಬೇಲ್‌ಪುರಿ, ಬೋಂಡಾ, ಬಜ್ಜಿ, ಕಡ್ಲೆಹುಸ್ಲಿ ಮಾರಾಟ ಜೋರಾಗಿಯೆ ನಡೆಯಿತು.

ಮಕ್ಕಳ ಸಂತೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ‘ವ್ಯಾಪಾರ ವಹಿವಾಟಿನಿಂದ ಮಕ್ಕಳಲ್ಲಿ ನಿತ್ಯ ಜೀವನದ ಅನುಭವವಾಗುತ್ತದೆ. ತಂದೆ, ತಾಯಿ ಅಂಗಡಿಗೆ ಹೋಗಿ ತರಕಾರಿ ತರಲು ತಿಳಿಸಿದರೆ ಯಾವ ರೀತಿ ವ್ಯಾಪಾರ ಮಾಡಬೇಕೆಂಬ ಅರಿವು ಸಿಕ್ಕಂತಾಗಿದೆ’ ಎಂದರು.

‘ಕೇವಲ ಪಾಠ, ಕ್ರೀಡೆಗೆ ಸೀಮಿತವಾಗದೇ ಮಕ್ಕಳಲ್ಲಿ ಸಾಮಾಜಿಕ ಬದುಕಿನ ಪರಿಚಯ ಮಾಡಿಕೊಡುವ ಉದ್ದೇಶದಿಂದ ಅವರ ಮುಂದಿನ ಜೀವನದಲ್ಲಿ ನೆರವಾಗಲು ಮಕ್ಕಳ ಸಂತೆ ಪೂರಕವಾಗಿದೆ’ ಎಂದು ಹೇಳಿದರು.

ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸಚ್ಚಿದಾನಂದಮೂರ್ತಿ, ಶ್ವೇತಾ, ಸುಗುಣಾ, ಲೀಲಾ, ಫರೀದಾ, ವೆಂಕಟರೆಡ್ಡಿ, ಸಿ.ಎಲ್.ಶ್ರೀನಿವಾಸಲು, ಎಚ್.ಎಂ.ಸುನೀತಾ, ಡಿ.ಚಂದ್ರಶೇಖರ್, ವಸಂತಮ್ಮ, ಸುಗುಣಾ, ಪ್ರಶಿಕ್ಷಣಾರ್ಥಿಗಳಾದ ಕೋಮಲಾ, ಭಾರತಿ, ಶಿಲ್ಪಾ, ಸುನೀತಾ, ನಾಗರತ್ನ, ಮಹೇಶ್, ರಾಜು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು