ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ವಿಭಜನೆಗೆ ತಂತ್ರ, ಪ್ರತಿತಂತ್ರ

ಹುಮನಾಬಾದ್ ಕ್ಷೇತ್ರ: ತ್ರಿಕೋನ ಸ್ಪರ್ಧೆ---– ಆರು ಮಂದಿ ಕಣದಲ್ಲಿ
Last Updated 9 ಮೇ 2018, 8:16 IST
ಅಕ್ಷರ ಗಾತ್ರ

ಬೀದರ್‌: ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಮತದಾನಕ್ಕೆ ಮೂರು ದಿನಗಳು ಮಾತ್ರ ಬಾಕಿ ಇರುವುದರಿಂದ ಚುನಾವಣಾ ಕಾವು ಮತ್ತಷ್ಟು ಹೆಚ್ಚಿದೆ. ಈ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬಂದರೂ ಮತ ವಿಭಜನೆಯ ಲೆಕ್ಕಾಚಾರ ಮಹತ್ವ ಪಡೆದುಕೊಳ್ಳುತ್ತಿದೆ.

ಶಾಸಕ ರಾಜಶೇಖರ ಪಾಟೀಲ ಹತ್ತು ವರ್ಷಗಳ ಅವಧಿಯಲ್ಲಿ ಹುಮನಾಬಾದ್‌ ಕ್ಷೇತ್ರದಲ್ಲಿ ತಮ್ಮ ಕೋಟೆಯನ್ನು ಭದ್ರಪಡಿಸಿಕೊಂಡಿದ್ದಾರೆ. ರಾಜಶೇಖರ ಅವರ ತಂದೆ ಬಸವರಾಜ ಪಾಟೀಲ ನಾಲ್ಕು ಅವಧಿಗೆ ಈ ಕ್ಷೇತ್ರದ ಶಾಸಕರಾಗಿದ್ದರು. ಪ್ರತಿ ಚುನಾವಣೆಯಲ್ಲಿ ಕುಟುಂಬದ ಸದಸ್ಯರೇ ನೇತೃತ್ವ ವಹಿಸಿಕೊಂಡು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತ ಬಂದಿದ್ದಾರೆ. ಕುಟುಂಬದವರು ಹೊರಗಿನ ವ್ಯಕ್ತಿಗಳ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿಲ್ಲ. ಈ ಬಾರಿಯೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಕಾರ್ಯವ್ಯಾಪ್ತಿ ಮಾಡಿಕೊಂಡು ಮತ ಬೇಟೆಯಲ್ಲಿ ತೊಡಗಿದ್ದಾರೆ.

ಭಾರತೀಯ ರಿಪಬ್ಲಿಕನ್‌ ಪಾರ್ಟಿಯ ಅಂಕುಶ ಗೋಖಲೆ ಹಾಗೂ ಎಐಎಂಇಪಿ ಅಭ್ಯರ್ಥಿ ಅಂಜುಮ ಬೇಗಂ ಕಾಂಗ್ರೆಸ್‌ಗೆ ಮಗ್ಗಲು ಮುಳ್ಳು ಆಗಿದ್ದಾರೆ. ಮಾಜಿ ಸಚಿವ ದಿವಂಗತ ಮೆರಾಜುದ್ದಿನ್‌ ಪಟೇಲ್‌ ಸಹೋದರ ನಸಿಮೋದ್ದಿನ್‌ ಪಟೇಲ್‌ ಕ್ಷೇತ್ರದಲ್ಲಿ ಪ್ರಬಲವಾಗುತ್ತಿರುವ ಕಾರಣ ಅವರ ವೇಗಕ್ಕೆ ತಡೆಯೊಡ್ಡಲು ರಾಜಶೇಖರ ಪಾಟೀಲ ಎಲ್ಲ ವಿಧದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಆಸ್ತಿ ಹಂಚಿಕೆ ವಿಷಯದಲ್ಲಿ ನಸಿಮೋದ್ದಿನ್ ಹಾಗೂ ಮೆರಾಜುದ್ದಿನ್‌ ಪಟೇಲ್‌ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಇವೆ. ರಾಜಶೇಖರ ಪಾಟೀಲರು ಹಿಂದೆ ಜೆಡಿಎಸ್‌ನ ಮೆರಾಜುದ್ದಿನ್‌ ಪಟೇಲ್‌ ವಿರುದ್ಧ ಸೋತರೂ ಅವರ ಪುತ್ರಿಯರು ಹಾಗೂ ಅಳಿಯಂದಿರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಂಡು ತಮ್ಮ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸಿಮೋದ್ದಿನ್ ಪಟೇಲ್‌ ಕಳೆದ ಚುನಾವಣೆಯಲ್ಲಿ 42 ಸಾವಿರ ಮತಗಳನ್ನು ಪಡೆದು ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ. ಜೆಡಿಎಸ್‌ ಮುಖಂಡರು ಬಿಜೆಪಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮುಸ್ಲಿಂರ ಮತಗಳು ಸಹಜವಾಗಿ ಬರಲಿವೆ. ಲಿಂಗಾಯತ ಮತಗಳು ರಾಜಶೇಖರ ಹಾಗೂ ಬಿಜೆಪಿಯ ಸುಭಾಷ ಕಲ್ಲೂರ್‌ಗೆ ಹಂಚಿ ಹೋದರೂ ಸಾಕು ಜೆಡಿಎಸ್‌ಗೆ ಅನುಕೂಲವಾಗಲಿದೆ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಾರೆ.

1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಸುಭಾಷ ಕಲ್ಲೂರು ಗೆಲುವು ಸಾಧಿಸಿದ್ದರು. ಬಿಜೆಪಿಯವರು ಈಗಲೂ 20 ವರ್ಷಗಳ ಹಿಂದಿನ ಲೆಕ್ಕಾಚಾರದಲ್ಲಿದ್ದಾರೆ. ಮೇಲ್ವರ್ಗದವರ ಮತಗಳು ಬರಲಿವೆ ಎನ್ನುವ ವಿಶ್ವಾಸದಲ್ಲಿ ಇದ್ದಾರೆ. ಅಭ್ಯರ್ಥಿಯ ವೈಯಕ್ತಿಕ ಪ್ರಭಾವದ ಮತಗಳು ಹಾಗೂ ಪಕ್ಷದ ಸಾಂಪ್ರದಾಯಿಕ ಮತಗಳು ಬಂದರೂ ಬಿಜೆಪಿ ಅಭ್ಯರ್ಥಿ ಗೆಲುವಿನ ನಗೆ ಬೀರಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಯವರು ಇದ್ದಾರೆ.

ಚುನಾವಣಾ ಕಣದಲ್ಲಿ ಇಬ್ಬರು ಮುಸ್ಲಿಂರು ಹಾಗೂ ಮೂವರು ದಲಿತರು ಇದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಮತಗಳು ವಿಭಜನೆಯಾಗುವುದರಿಂದ ಬಿಜೆಪಿಗೆ ನೆಲೆಯೂರಲು ಅವಕಾಶ ದೊರೆಯಲಿದೆ ಎಂದು ಬಿಜೆಪಿ ಕಾರ್ಯಕರ್ತರು ತಮ್ಮದೇಯಾದ ಲೆಕ್ಕಾಚಾರದಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಪ್ರಸ್ತುತ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ನಡುವೆಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಬ್ಬರ ಕಂಡು ಬರುತ್ತಿದೆ.

ಕಣದಲ್ಲಿರುವ ಅಭ್ಯರ್ಥಿಗಳು

ರಾಜಶೇಖರ ಬಿ.ಪಾಟೀಲ (ಕಾಂಗ್ರೆಸ್)

ಸುಭಾಷ ಕಲ್ಲೂರ್‌್ (ಬಿಜೆಪಿ)

ನಸಿಮೋದ್ದಿನ್ ಪಟೇಲ್‌ (ಜೆಡಿಎಸ್‌)

ಪ್ರಶಾಂತ ಮಜಕೂರೆ (ಅಂಬೇಡ್ಕರ್ ಪೀಪಲ್ಸ್ ಪಾರ್ಟಿ)

ಅಂಕುಶ ಗೋಖಲೆ (ಭಾರಿಪ)

ಅಂಜುಮ ಬೇಗಂ (ಎಐಎಂಇಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT