ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋಳರ ಶೈಲಿಯ ದೇವಾಲಯ

ಮಾಲೂರು: ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ
Last Updated 25 ಡಿಸೆಂಬರ್ 2020, 6:07 IST
ಅಕ್ಷರ ಗಾತ್ರ

ಮಾಲೂರು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಸೋಮವಾರ ನಡೆಯಲಿರುವ ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.

ದೇವಾಲಯವು ಚೋಳರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ರಾಜ್ಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯವರು ಸುಮಾರು 900 ನೂರು ವರ್ಷಗಳ ಹಿಂದಿನ ದೇವಾಲಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಗರ್ಭಗುಡಿಯಲ್ಲಿರುವ ಮೂಲಸ್ವಾಮಿಯ ಮೂರ್ತಿಯು ಒಂದೂವರೆ ಅಡಿ ಪದ್ಮ ಪೀಠದ ಮೇಲೆ ಮೂರೂವರೆ ಅಡಿ ಎತ್ತರವಿರುವ ದಿವ್ಯ ಮಂಗಳ ಮೂರ್ತಿಯು ಅಚ್ಚರಿಮೂಡಿಸುತ್ತದೆ. ವೆಂಕಟೇಶ್ವರನ ಎಡ ಮತ್ತು ಬಲ ಭಾಗಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರನ್ನು ಕಾಣಬಹುದು.

ಪ್ರತಿ ನಿತ್ಯ ದೇವಾಲಯವು ಮುಂಜಾನೆ ಸುಪ್ರಭಾತದೊಂದಿಗೆ ಆರಂಭವಾಗಿ ರಾತ್ರಿಯವರೆಗೆ ಯಾವುದೇ ಬಿಡುವು ಇಲ್ಲದೆ ದರ್ಶನಕ್ಕಾಗಿ ತೆರೆದಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಪುಷ್ಯ ಮಾಸದಲ್ಲಿ ಬರುವ ವೈಕುಂಠ ಏಕಾದಶಿಯಂದು ವಿಶೇಷ ಪೂಜ ಕೈಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ವೈಕುಂಠ ಏಕಾದಶಿಯಂದು ಸ್ವಾಮಿಗೆ ವಿಶೇಷ ಅಲಂಕಾರ ತಿರುಮಂಜನ ವಜ್ರ ವೈಡೂರ್ಯಭರಿತ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಲಾಗುತ್ತದೆ. ನಂತರ ಸಿಂಗರಿಸಿದ ಉತ್ಸವ ಮೂರ್ತಿಗಳನ್ನು ವೈಕುಂಠ ದ್ವಾರದಲ್ಲಿ ಉಯ್ಯಾಲೆಯ ಮಣೆಯ ಮೇಲೆ ಕೂರಿಸಿ ವಿಶೇಷ ಆಸ್ಥಾನ ಸೇವೆಯನ್ನು ನಡೆಸಲಾಗುತ್ತದೆ.

ರಾಜ್ಯದ ನಾನಾ ಭಾಗಗಳು ಸೇರಿದಂತೆ ನೆರೆಯ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಪಟ್ಟಣ ಸೇರಿದಂತೆ ಹೊಸಕೋಟೆ, ಸರ್ಜಾಪುರ, ಆನೇಕಲ್ ಮತ್ತು ಬೇರಕಿಯಿಂದ ಕಾಲ್ನಡಿಗೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ . ಭಕ್ತರ ಹೆಚ್ಚಿನ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ₹1 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶ್ರೀಸ್ವಾಮಿಯ ದರ್ಶನ ಪಡೆಯಲು ಸರತಿ ಸಾಲು ಕಟ ಕಟೆಯನ್ನು ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ಜಿ.ಪಂ.ವತಿಯಿಂದ ₹30 ಲಕ್ಷ ವೆಚ್ಚದಲ್ಲಿಹೈ ಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿ ಹಾಗೂ ಷರತ್ತುಗಳನ್ನು ಅಳವಡಿಸಿಕೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಭಕ್ತರು ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ ಬಳಸಬೇಕು. ಪ್ರಸಾದ ವಿತರಣೆ ಇರುವುದಿಲ್ಲ. 65ಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು, 10 ವರ್ಷದೊಳಗಿನ ಮಕ್ಕಳು, ಆರೋಗ್ಯ ಸಮಸ್ಯೆಇರುವ ವ್ಯಕ್ತಿಗಳು ಹಾಗೂ ಗರ್ಭಿಣಿಯರಿಗೆ ದೇವಾಲಯದ ಪ್ರವೇಶ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತದ ಸೂಚನೆಯನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಟಿ.ಮಂಜುಳ ತಿಳಿಸಿದರು.

ದೇವಾಲಯದ ಪ್ರಧಾನ ಅರ್ಚಕರಾದ ರವಿ ನೇತೃತ್ವದಲ್ಲಿ ಶ್ರೀದೇವಿ- ಭೂದೇವಿ ಸಮೇತ ಶ್ರೀಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದೆ.

ಸೂಚನೆ ಪಾಲಿಸಿ

ಚಿಕ್ಕತಿರುಪತಿಯ ಶ್ರೀದೇವಿ ಭೂದೇವಿ ಸಮೇತ ಅಭಯ ಹಸ್ತ ಉಳ್ಳ ಶ್ರೀ ಸ್ವಾಮಿ ದರ್ಶನ ಮಾಡುವುದರಿಂದ ದೊಡ್ಡ ತಿರುಪತಿಯಲ್ಲಿನ ಸ್ವಾಮಿಯ ದರ್ಶನ ಮಾಡಿದಷ್ಟೆ ಭಾಗ್ಯ ಭಕ್ತರಿಗೆ ಉಂಟಾಗುತ್ತದೆ. ವೈಕುಂಠ ಏಕಾದಶಿಯಂದು 1 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ವೈಕುಂಠದ್ವಾರದಲ್ಲಿ ಸ್ವಾಮಿಯ ದರ್ಶನ ಪಡೆಯುತ್ತಾರೆ ಪ್ರತಿಯೊಬ್ಬರು ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ವೈಕುಂಠ ದರ್ಶನ ಪಡೆಯಬೇಕು.

ಪ್ರಧಾನ ಅರ್ಚಕ ರವಿ.

ವೃದ್ಧರು, ಮಕ್ಕಳಿಗೆ ನಿಷೇಧ

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯಂದು ಶ್ರೀಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ 60 ವರ್ಷದ ಮೇಲ್ಪಟ್ಟವರು ಹಾಗೂ 10 ವರ್ಷದ ಒಳಗಡೆ ಇರುವ ಮಕ್ಕಳಿಗೆ ದೇವಾಲಯಕ್ಕೆ ಜಿಲ್ಲಾಡಳಿತದ ಆದೇಶದಂತೆ ಪ್ರವೇಶ ನಿಷೇಧಿಸಲಾಗಿದೆ.

ದೇವಾಲಯ ಕಾರ್ಯನಿರ್ವಾಣಾಧಿಕಾರಿ ಟಿ.ಮಂಜುಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT