ಚೌಡದೇನಹಳ್ಳಿ ಪಿಡಿಒ ವರ್ಗಾವಣೆಗೆ ಒತ್ತಾಯ

7

ಚೌಡದೇನಹಳ್ಳಿ ಪಿಡಿಒ ವರ್ಗಾವಣೆಗೆ ಒತ್ತಾಯ

Published:
Updated:
Deccan Herald

ಕೋಲಾರ: ತಾಲ್ಲೂಕಿನ ಚೌಡದೇನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇಘನಾ ಅವರ ವರ್ಗಾವಣೆಗೆ ಒತ್ತಾಯಿಸಿ ದಲಿತ ಸಿಂಹ ಸೇನೆ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.

‘ಪಿಡಿಒ ಮೇಘನಾ ಅವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಅಲ್ಲದೇ, ಗ್ರಾ.ಪಂ ಕರ ಸಂಗ್ರಹಗಾರ ನಾರಾಯಣಸ್ವಾಮಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಮೇಘನಾ ಅವರು ಆಗೊಮ್ಮೆ ಈಗೊಮ್ಮೆ ಕಚೇರಿಗೆ ಬರುತ್ತಾರೆ. ಸಾರ್ವಜನಿಕರು ಸಮಸ್ಯೆ ತಿಳಿಸಲು ಅವರ ಮೊಬೈಲ್‌ಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಲ್ಲದೇ, ನರೇಗಾ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ’ ಎಂದು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್ ಆರೋಪಿಸಿದರು.

‘ಮೇಘನಾ ಅವರು ವರ್ಗಾವಣೆಯಾಗಿ ಬಂದ ದಿನದಿಂದಲೂ ಸಾಕಷ್ಟು ಅಕ್ರಮ ನಡೆದಿವೆ. ಹೊಸ ಬಡಾವಣೆ ನಿರ್ಮಾಣ ಮತ್ತು ಇ–ಸ್ವತ್ತು ಖಾತೆಗೆ ಅವರು ಲಂಚ ಪಡೆದಿದ್ದಾರೆ. ಅವರ ಕರ್ತವ್ಯ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಮೂಲಸೌಕರ್ಯ ಸಮಸ್ಯೆ ಗಂಭೀರವಾಗಿದ್ದು, ಸಾರ್ವಜನಿಕರು ಬವಣೆ ಪಡುವಂತಾಗಿದೆ’ ಎಂದು ದೂರಿದರು.

ಕಿರುಕುಳ ನೀಡಿದ್ದಾರೆ: ‘ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ನಡೆಯದಿದ್ದರೂ ಮೇಘನಾ ಅವರು ಗುತ್ತಿಗೆದಾರರಿಂದ ಲಂಚ ಪಡೆದು ಬಿಲ್ ಪಾವತಿಸಿದ್ದಾರೆ. ಈ ಅಕ್ರಮ ಪ್ರಶ್ನಿಸಿದ ಕರ ಸಂಗ್ರಹಗಾರ ನಾರಾಯಣಸ್ವಾಮಿ ಅವರನ್ನು ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿದ್ದಾರೆ. ಜತೆಗೆ ನಾರಾಯಣಸ್ವಾಮಿ ವಿರುದ್ಧ ಸುಳ್ಳು ಆರೋಪ ಮಾಡಿ ಶಿಸ್ತುಕ್ರಮ ಜರುಗಿಸುವುದಾಗಿ ಬೆದರಿಸುತ್ತಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಮೇಘನಾ ಅವರ ಅಕ್ರಮಗಳ ಸಂಬಂಧ ಸಮಗ್ರ ತನಿಖೆ ನಡೆಸಬೇಕು. ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಜತೆಗೆ ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ಮಂಜುನಾಥ್, ಶಂಕರ್, ಬೈರಪ್ಪ, ಚಂದ್ರಶೇಖರ್, ಮಹೇಶ್, ನಾರಾಯಣಸ್ವಾಮಿ, ಬಾಬು, ಶ್ರೀನಿವಾಸ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !