ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ಕಚೇರಿ ಎದುರು ಸಿಐಟಿಯು ಪ್ರತಿಭಟನೆ

ಕೃಷಿ–ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆ ತಿರಸ್ಕರಿಸಲು ಒತ್ತಾಯ
Last Updated 24 ಫೆಬ್ರುವರಿ 2021, 14:12 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಮತ್ತು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ರಾಜ್ಯ ಬಜೆಟ್ ಅಧಿವೇಶನದಲ್ಲಿ ತಿರಸ್ಕರಿಸುವಂತೆ ಒತ್ತಾಯಿಸಿ ಸಿಐಟಿಯು ಸದಸ್ಯರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಬಂದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ 29 ಕಾನೂನುಗಳನ್ನು 4 ಸಂಹಿತೆಗಳಾಗಿ ಮಾಡಿರುವ ಕೇಂದ್ರದ ಕಾಯ್ದೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಈ ಕಾಯ್ದೆಗಳು ಜನ ವಿರೋಧಿಯಾಗಿವೆ. ಅಧಿಕಾರದಲ್ಲಿರುವ ಬಿಜೆಪಿಗೆ ಜನಪರ ಕಾಳಜಿಯಿಲ್ಲ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವ ಅಧ್ಯಕ್ಷ ನಾರಾಯಣಸ್ವಾಮಿ ಕಿಡಿಕಾರಿದರು.

‘ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರನ್ನು ಬೀದಿಗೆ ತಂದಿದೆ. ಸರ್ಕಾರದ ಜನ ವಿರೋಧಿ ನಡೆಯಿಂದ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬಂದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ನೈತಿಕತೆಯಿಲ್ಲ: ‘ಸರ್ಕಾರಗಳು ಕೃಷಿ ಕ್ಷೇತ್ರ ನಾಶ ಮಾಡಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ರೈತರನ್ನು ಶೋಷಿಸುತ್ತಿವೆ. ರೈತ ವಿರೋಧಿ ಕಾಯ್ದೆಗಳನ್ನು ಮಂಡಿಸಿ ತುಘಲಕ್‌ ದರ್ಬಾರ್‌ ನಡೆಸುತ್ತಿವೆ. ಲಜ್ಜೆಗೆಟ್ಟ ಸರ್ಕಾರಗಳಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಸರ್ಕಾರಗಳು ರೈತರು, ಕಾರ್ಮಿಕರು, ಬಡ ಜನರನ್ನು ಬೀದಿಗೆ ತಳ್ಳಿ ಬಂಡವಾಳಶಾಹಿಗಳ ಹಿತ ಕಾಯಲು ಹೊರಟಿವೆ. ಅಭಿವೃದ್ಧಿ ಹೆಸರಿನಲ್ಲಿ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ಅರಾಜಕತೆ ಸೃಷ್ಟಿಸುತ್ತಿವೆ. ಲಾಕ್‌ಡೌನ್ ನಂತರ ಸಂಘಟಿತ ಹಾಗೂ ಅಸಂಘಟಿತ ವಲಯದ 14 ಕೋಟಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಜನರ ಆದಾಯ ಕುಸಿಯುತ್ತಿದ್ದು, ಜೀವನ ಭದ್ರತೆ ದುರ್ಬಲಗೊಳ್ಳುತ್ತಿದೆ’ ಎಂದು ದೂರಿದರು.

ಕನಿಷ್ಠ ವೇತನ: ‘ಕೃಷಿ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಬೇಡಿಕೆ ಈಡೇರಿಸಬೇಕು. ಕಾರ್ಮಿಕರ ಪರವಾದ ಕಾನೂನುಗಳು ಜಾರಿಯಾಗಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ತಿರಸ್ಕರಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಧಾರದಲ್ಲಿ ಎಲ್ಲಾ ಕಾರ್ಮಿಕರಿಗೆ ₹ 24 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸಾರ್ವಜನಿಕ ಉದ್ದಿಮೆಗಳ ಮತ್ತು ಸೇವೆಗಳ ಖಾಸಗೀಕರಣ ನೀತಿ ಕೈಬಿಡಬೇಕು. ಸರ್ಕಾರದ ನಿಗಮ ಮಂಡಳಿಗಳು ಮತ್ತು ಇಲಾಖೆಗಳಲ್ಲಿ ದುಡಿಯುವ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಕಾಯಂ ಮಾಡಬೇಕು. ಕಾರ್ಮಿಕರ ಉದ್ಯೋಗ ಉಳಿಸಿ- ಆರ್ಥಿಕತೆ ರಕ್ಷಿಸಬೇಕು. ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಬಾರದು’ ಎಂದು ಆಗ್ರಹಿಸಿದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಎಂ.ಭೀಮರಾಜ್, ಜಿಲ್ಲಾ ಅಂಗನವಾಡಿ ನೌಕರರ ಸಂಘದ ಸದಸ್ಯೆ ವೆಂಕಟಲಕ್ಷಮ್ಮ, ಸಿಐಟಿಯು ಸದಸ್ಯರಾದ ಕೇಶವರಾವ್, ಆಶಾ, ಮಂಜುಳಾ, ಲೋಕೇಶ್ವರಿ, ಜಯಲಕ್ಷ್ಮಿ, ನಾರಾಯಣಪ್ಪ, ವೆಂಕಟರಾಮೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT