ಮಂಗಳವಾರ, ಡಿಸೆಂಬರ್ 1, 2020
21 °C
ಕಾಂಗ್ರೆಸ್‌– ಜೆಡಿಎಸ್‌ ಸದಸ್ಯರ ಸ್ಪರ್ಧೆ: ಫಲಿತಾಂಶ ಕಾಯ್ದಿರಿಸಿದ ಚುನಾವಣಾಧಿಕಾರಿ

ಅಧ್ಯಕ್ಷ– ಉಪಾಧ್ಯಕ್ಷಗಾದಿ ಚುನಾವಣೆ ಸುಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಗೆ ಹೈಕೋರ್ಟ್‌ ಆದೇಶದ ಅನ್ವಯ ಭಾನುವಾರ ಚುನಾವಣೆ ನಡೆಸಲಾಯಿತು.

ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಸೋಮಶೇಖರ್ ಅವರು ನಗರಸಭೆ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು.

ನಗರಸಭೆಯ ಅಧ್ಯಕ್ಷಗಾದಿ ಹಿಂದುಳಿದ ವರ್ಗ–ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಜೆಡಿಎಸ್‌ ಪಕ್ಷದಿಂದ ಒಂದನೇ ವಾರ್ಡ್‌ ಸದಸ್ಯೆ ಆರ್‌.ಶ್ವೇತಾ ಹಾಗೂ 2ನೇ ವಾರ್ಡ್‌ ಸದಸ್ಯ ಎನ್‌.ಎಸ್‌.ಪ್ರವೀಣ್‌ ಅವರು ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಸ್ಥಳದಲ್ಲಿ ಹಾಜರಿದ್ದು, ಪಕ್ಷದ ಅಭ್ಯರ್ಥಿಗಳಿಗೆ ಸಲಹೆ ಸೂಚನೆ ನೀಡಿದರು.

ಕಾಂಗ್ರೆಸ್‌ ಪಕ್ಷದಿಂದ 23ನೇ ವಾರ್ಡ್‌ ಸದಸ್ಯೆ ಅಝ್ರ ನಸ್ರೀನ್ ಅಧ್ಯಕ್ಷ ಸ್ಥಾನಕ್ಕೆ ಮತ್ತು 11ನೇ ವಾರ್ಡ್‌ನ ಪಕ್ಷೇತರ ಸದಸ್ಯ ವಿ.ಮಂಜುನಾಥ್‌ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರು. ಈ ನಾಲ್ಕೂ ಮಂದಿಯ ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿಯು ಉಮೇದುವಾರಿಕೆ ಸರಿಯಿದೆ ಎಂದು ಅಂಗೀಕರಿಸಿದರು.

ಬಳಿಕ ನಾಮಪತ್ರ ಹಿಂಪಡೆಯಲು ಮಧ್ಯಾಹ್ನ 12 ಗಂಟೆವರೆಗೆ ಕಾಲಾವಕಾಶ ನೀಡಲಾಯಿತು. ಆದರೆ, ಉಭಯ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆಯಲಿಲ್ಲ. ಹೀಗಾಗಿ ಚುನಾವಣಾಧಿಕಾರಿಯು ಚುನಾವಣೆ ನಡೆಸುವ ನಿರ್ಧಾರಕ್ಕೆ ಬಂದರು.ಸದಸ್ಯರ ಗೈರು: ನಗರಸಭೆಯಲ್ಲಿ 35 ವಾರ್ಡ್‌ಗಳಿದ್ದು, ಕಾಂಗ್ರೆಸ್‌ 12 ಸದಸ್ಯ ಬಲ ಹೊಂದಿದೆ.

ಉಳಿದಂತೆ ಜೆಡಿಎಸ್‌ 8, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) 4, ಬಿಜೆಪಿ 3 ಸದಸ್ಯ ಬಲ ಹೊಂದಿವೆ. 8 ಮಂದಿ ಪಕ್ಷೇತರ ಸದಸ್ಯರಿದ್ದಾರೆ. ನಗರಸಭೆಯ 35 ಮಂದಿ ಚುನಾಯಿತ ಸದಸ್ಯರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಒಟ್ಟಾರೆ 38 ಮಂದಿಗೆ ಮತದಾನದ ಹಕ್ಕಿತ್ತು.

ಅಂತಿಮವಾಗಿ ಕಾಂಗ್ರೆಸ್‌ನ 7 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದರು ಮತ್ತು 5 ಸದಸ್ಯರು ಗೈರಾದರು. ಜೆಡಿಎಸ್‌ನ 8 ಸದಸ್ಯರ ಜತೆಗೆ ಶಾಸಕ ಶ್ರೀನಿವಾಸಗೌಡ ಮತ್ತು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಸಹ ಚುನಾವಣೆಯಲ್ಲಿ ಭಾಗಿಯಾದರು. ಬಿಜೆಪಿಯ 3 ಸದಸ್ಯರ ಪೈಕಿ ಇಬ್ಬರು ಗೈರಾದರು.

ಎಸ್‌ಡಿಪಿಐನ ಇಬ್ಬರು ಮತ್ತು 8 ಮಂದಿ ಪಕ್ಷೇತರ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಮತದಾನದ ಹಕ್ಕಿದ್ದರೂ ಚುನಾವಣೆಯಿಂದ ದೂರ ಉಳಿದರು. ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು.

ಮತ ವಿವರ: ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜೆಡಿಎಸ್‌ನ ಶ್ವೇತಾ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಜೆಡಿಎಸ್‌ನ ಪ್ರವೀಣ್‌ಗೌಡ ಪರ ತಲಾ 20 ಮತ ಚಲಾವಣೆಯಾದವು. ಜೆಡಿಎಸ್‌ನ 8 ಸದಸ್ಯರು, ಶಾಸಕ ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಎಸ್‌ಡಿಪಿಐನ ಇಬ್ಬರು ಸದಸ್ಯರು, ಬಿಜೆಪಿಯ ಒಬ್ಬರು ಸದಸ್ಯರು ಮತ್ತು 7 ಮಂದಿ ಪಕ್ಷೇತರ ಸದಸ್ಯರು ಜೆಡಿಎಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಕಾಂಗ್ರೆಸ್‌ ಅಭ್ಯರ್ಥಿಗಳು ತಲಾ 8 ಮತ ಗಳಿಸಿದರು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು