ಮಕ್ಕಳ ಸಮೀಕ್ಷೆಗೆ ಪೋಷಕರು ಸಹಕರಿಸಿ

ಮಂಗಳವಾರ, ಮಾರ್ಚ್ 26, 2019
22 °C

ಮಕ್ಕಳ ಸಮೀಕ್ಷೆಗೆ ಪೋಷಕರು ಸಹಕರಿಸಿ

Published:
Updated:
Prajavani

ಕೋಲಾರ: ‘ಮಕ್ಕಳ ಸಮೀಕ್ಷೆಗೆ ಪೋಷಕರು ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದರು.

ಜಿಲ್ಲಾಡಳಿತ ಹಮ್ಮಿಕೊಂಡಿರುವ 2019–20ನೇ ಸಾಲಿನ ಏಕ ರೂಪದ ಕುಟುಂಬ ಸಮೀಕ್ಷೆಗೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಇತ್ತೀಚೆಗೆ ನಡೆಸಿದ ಮಕ್ಕಳ ಸಮೀಕ್ಷೆಯಲ್ಲಿ ತುಂಬಾ ವ್ಯತ್ಯಾಸ ಕಂಡುಬಂದಿವೆ. ಹೀಗಾಗಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘1,900 ಮಂದಿ ಅಂಗನವಾಡಿ ಕಾರ್ಯಕರ್ತೆಯರು, 1,100 ಮಂದಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟಾರೆ 3 ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗವಹಿಸುತ್ತಾರೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಜಿಲ್ಲೆಯ ಸಮಗ್ರ ಚಿತ್ರಣ ದೊರೆಯಲಿದೆ. ಜತೆಗೆ ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

‘ಮತ್ತೆ ಮತ್ತೆ ಸಮೀಕ್ಷೆ ಮಾಡಲಾಗುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಸರಿಯಾದ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಣ್ಣುಗಳಿದ್ದಂತೆ. ಆದರೆ, ಈ ಇಲಾಖೆಗಳು ಪ್ರತ್ಯೇಕ ಸಮೀಕ್ಷೆ ನಡೆಸಿ ನೀಡಿದ ವರದಿಯ ದತ್ತಾಂಶದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿವೆ. ಈ ಕಾರಣಕ್ಕಾಗಿ ಸರ್ಕಾರ ಜಂಟಿ ಸಮೀಕ್ಷೆಗೆ ಆದೇಶಿಸಿ ಎರಡೂ ಇಲಾಖೆಗಳಿಗೆ ಜವಾಬ್ದಾರಿ ನೀಡಿದೆ’ ಎಂದು ವಿವರಿಸಿದರು.

ಹೆಸರು ನೋಂದಾಯಿಸಿ: ‘18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಜತೆಗೆ ಪಟ್ಟಿಯಲ್ಲಿ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ವಸಂತ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಶಿಶು ಅಭಿವೃದ್ಧಿ ಅಧಿಕಾರಿ ಜಯದೇವಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !