ಬುಧವಾರ, ನವೆಂಬರ್ 13, 2019
28 °C

ಹೈನೋದ್ಯಮ ಅಭಿವೃದ್ಧಿಗೆ ಸಹಕರಿಸಿ

Published:
Updated:
Prajavani

ಕೋಲಾರ: ‘ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ರಾಸುಗಳಿಗೆ ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿಯ ಅಡ್ಡ ಪಡಿಣಾಮ ಬೀರುವುದಿಲ್ಲ’ ಎಂದು ಸುಗಟೂರು ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಶ್ರೀನಿವಾಸಗೌಡ ತಿಳಿಸಿದರು.

ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 16ನೇ ಸುತ್ತಿನ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ರಾಸುಗಳಿಗೆ ತಪ್ಪದೇ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಿಸಿ ಹೈನೋದ್ಯಮ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

‘ಕಾಲು ಬಾಯಿ ಜ್ವರ ರಾಸುಗಳಿಗೆ ಅತ್ಯಂತ ಮಾರಕವಾಗಿದ್ದು, ಇದರ ನಿಯಂತ್ರಣ ಅಗತ್ಯವಾಗಿದೆ. ರೈತರು ತಪ್ಪದೇ ಪ್ರತಿ ರಾಸಿಗೂ ಲಸಿಕೆ ಹಾಕಿಸಬೇಕು. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ಆರ್ಥಿಕವಾಗಿ ಉಸಿರಾಡಲು ಹೈನೋದ್ಯಮ ಜೀವನಾಡಿಯಾಗಿದೆ. ಈ ಉದ್ಯಮಕ್ಕೆ ಯಾವುದೇ ತೊಂದರೆಯಾದರೆ ಜಿಲ್ಲೆಯ ಜನತೆ ಸಂಕಷ್ಟಕ್ಕೀಡಾಗುತ್ತಾರೆ. ಜಿಲ್ಲೆಯಲ್ಲಿ 10 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ, ರಾಜ್ಯದಲ್ಲೇ ಹಾಲು ಸಂಗ್ರಹಣೆಯಲ್ಲಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. 16ನೇ ಸುತ್ತಿನ ಲಸಿಕಾ ಕಾರ್ಯ ನಡೆಸುತ್ತಿದ್ದು ಈ ಕುರಿತು ರೈತರಿಗೆ ಅರಿವು ಮೂಡಿಸಬೇಕು’ ಎಂದು ಮನವಿ ಮಾಡಿದರು.

ಪಶು ವೈದ್ಯರಾದ ಡಾ.ಕೆ.ಎನ್.ಮಂಜುನಾಥರೆಡ್ಡಿ, ಡಾ.ಪ್ರಭಾಕರ್, ಡಾ.ಶ್ರೀನಾಥರೆಡ್ಡಿ, ಡಾ.ನಿತ್ಯಾನಂದ, ಡಾ.ನಿತಿನ್, ಡಾ.ವಿನಯ್, ಡಾ.ಚಂದ್ರಶೇಖರರೆಡ್ಡಿ, ಡಾ.ಲಲಿತ್, ಡಾ. ವಿ.ಎನ್.ಮಂಜುನಾಥ್, ಡಾ.ಸೀಮಂತಿನಿ, ಡಾ.ಕೆ.ಎಂ.ದೀಪ್ತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)