ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಟಿಕೋರರಿಗೆ ವಾಣಿಜ್ಯ ಬ್ಯಾಂಕ್‌ ಸಾಲ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಆರೋಪ
Last Updated 15 ಅಕ್ಟೋಬರ್ 2019, 16:14 IST
ಅಕ್ಷರ ಗಾತ್ರ

ಕೋಲಾರ: ‘ವಾಣಿಜ್ಯ ಬ್ಯಾಂಕ್‌ನವರು ಲೂಟಿಕಾರರಿಗೆ ಸಾಲ ಕೊಡುತ್ತಾರೆಯೇ ಹೊರತು ಬಡ ರೈತರು ಮತ್ತು ಮಹಿಳೆಯರಿಗೆ ಸಾಲ ಕೊಡುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಆರೋಪಿಸಿದರು.

ಡಿಸಿಸಿ ಬ್ಯಾಂಕ್, ಕ್ಯಾಲನೂರು ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ (ಎಸ್‌ಎಫ್‌ಸಿಎಸ್‌) ಸಹಯೋಗದಲ್ಲಿ ತಾಲ್ಲೂಕಿನ ಚಲ್ದಿಗಾನಹಳ್ಳಿಯಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


‘ಸಹಕಾರಿ ಬ್ಯಾಂಕ್‌ಗಳಿಂದ ಹಣ ದೋಚಿಕೊಂಡು ಹೋಗಿರುವ ನಿದರ್ಶನಗಳಿಲ್ಲ. ವಾಣಿಜ್ಯ ಬ್ಯಾಂಕ್‌ಗಳಿಂದ ಮಲ್ಯ, ನೀರವ್‌ ಮೋದಿಯಂತಹ ವ್ಯಕ್ತಿಗಳು ಸಾವಿರಾರು ಕೋಟಿ ಸಾಲ ಪಡೆದು ದೇಶದಿಂದಲೇ ಪರಾರಿಯಾಗಿದ್ದಾರೆ. ಆ ಹಣ ಬಡ ರೈತರದು ಹಾಗೂ ಮಹಿಳೆಯರದು. ಆದ ಕಾರಣ ವಾಣಿಜ್ಯ ಬ್ಯಾಂಕ್‌ಗಳ ಬದಲು ಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯದ ಹಣ ಠೇವಣಿ ಇಡಿ’ ಎಂದು ಮನವಿ ಮಾಡಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬಡ್ಡಿ ದಂಧೆಯ ಶೋಷಣೆ ನಿರ್ಮೂಲನೆ ಮಾಡಿ, ಮಹಿಳೆಯರನ್ನು ಆರ್ಥಿಕ ಸಬಲೀಕರಣಗೊಳಿಸುವುದು ಬ್ಯಾಂಕ್‌ನ ಗುರಿ. ಬ್ಯಾಂಕ್ ಹಾಗೂ ಆಡಳಿತ ಮಂಡಳಿ ಬಗ್ಗೆ ಲಘುವಾಗಿ ಮಾತನಾಡುವವರ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ’ ಎಂದು ಮಾರ್ಮಿಕವಾಗಿ ನುಡಿದರು.

‘ಮಹಿಳೆಯರಿಗೆ ಡಿಸಿಸಿ ಬ್ಯಾಂಕ್ ತವರು ಮನೆಯಿದ್ದಂತೆ. ವಾಣಿಜ್ಯ ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ಬಡವರನ್ನು ಕೂರಿಸಿ ಮಾತನಾಡುವ ಸೌಜನ್ಯ ಸಹ ತೋರುವುದಿಲ್ಲ. ಇಲ್ಲದ ಕಾರಣ ಹೇಳಿ ಸಾಲ ನಿರಾಕರಿಸಿ ಕಳುಹಿಸುತ್ತಾರೆ’ ಎಂದು ದೂರಿದರು.

ಆರ್ಥಿಕ ಶಕ್ತಿ: ‘ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢಗೊಂಡರೆ ಇಡೀ ಕುಟುಂಬ ಆರ್ಥಿಕವಾಗಿ ಸದೃಢವಾಗುತ್ತದೆ. ಹೀಗಾಗಿ ಬ್ಯಾಂಕ್‌ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಜತೆಗೆ ಬಡ್ಡಿ ಮಾಫಿಯಾ ವಿರುದ್ಧ ಹೋರಾಟ ನಡೆಸುತ್ತಿದೆ’ ಎಂದು ಬ್ಯಾಂಕ್‌ನ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಹೇಳಿದರು.

‘ತಾಲ್ಲೂಕಿನಲ್ಲಿ 1 ಲಕ್ಷ ಮಹಿಳೆಯರಿಗೆ ಸಾಲ ನೀಡುವ ಗುರಿಯಿದೆ. ಬ್ಯಾಂಕ್‌ನಿಂದ ರೈತರು ಹಾಗೂ ಮಹಿಳೆಯರಿಗೆ ದೊರೆಯುತ್ತಿರುವ ಸೌಕರ್ಯದ ಬಗ್ಗೆ ಇತರರಿಗೂ ಮಾಹಿತಿ ನೀಡಬೇಕು. ಸಣ್ಣ ಕೈಗಾರಿಕೋದ್ಯಮ ನಡೆಸುವವರಿಗೆ ಕಾಯಕ ಯೋಜನೆಯಡಿ ಸಾಲ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಸಾಲ ಹಿಂದಿರುಗಿಸಿ: ‘ಬ್ಯಾಂಕ್ ₹ 1,200 ಕೋಟಿ ಸಾಲ ನೀಡಿದ್ದು, ಇದರಲ್ಲಿ ಮಹಿಳೆಯರಿಗೆ ₹ 800 ಕೋಟಿ ಕೊಡಲಾಗಿದೆ. ಮಹಿಳೆಯರ ಮೇಲಿನ ನಂಬಿಕೆಯೇ ಇದಕ್ಕೆ ಕಾರಣ. ಸಾಲ ಪಡೆದಿರುವ ಮಹಿಳೆಯರು ನಂಬಿಕೆಗೆ ಚ್ಯುತಿ ಬಾರದಂತೆ ಸಕಾಲಕ್ಕೆ ಸಾಲ ಹಿಂದಿರುಗಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್.ಸೋಮಣ್ಣ ಕೋರಿದರು.

45 ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ₹ 1.92 ಕೋಟಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಕ್ಯಾಲನೂರು ಎಸ್‍ಎಫ್‌ಸಿಎಸ್ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಉಪಾಧ್ಯಕ್ಷ ಎನ್.ವೆಂಕಟರೆಡ್ಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ನಿರ್ದೇಶಕರಾದ ಶ್ರೀನಿವಾಸ್, ರಾಜಣ್ಣ, ವೆಂಕಟೇಶ್, ಪ್ರಕಾಶ್, ಶಂಕರಪ್ಪ, ಎಸ್.ಮಂಜುನಾಥ್, ಗೌರಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT