ಸೋಮವಾರ, ಡಿಸೆಂಬರ್ 16, 2019
17 °C
'ಸಾಲ ನೀತಿಯಲ್ಲಿ ದೋಷ'

ಗಂಟು ನುಂಗುವವರಿಗೆ ವಾಣಿಜ್ಯ ಬ್ಯಾಂಕ್‌ ಸಾಲ: ಶಾಸಕ ರಮೇಶ್‌ಕುಮಾರ್‌ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಾಣಿಜ್ಯ ಬ್ಯಾಂಕ್‌ಗಳು ತಮಗೂ ದೇಶಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿವೆ. ಜನ ವಿರೋಧಿಯಾಗಿರುವ ಈ ಬ್ಯಾಂಕ್‌ಗಳು ಗಂಟು ನುಂಗುವವರಿಗಷ್ಟೇ ಸಾಲ ನೀಡುತ್ತಿವೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಕಿಡಿಕಾರಿದರು.

ನೇಕಾರರು, ಜವಳಿ ಉದ್ದಿಮೆದಾರರಿಗೆ ಸಾಲ ನೀಡುವ ಕುರಿತು ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ‘ವಾಣಿಜ್ಯ ಬ್ಯಾಂಕ್‌ಗಳು ರೈತರು ಹಾಗೂ ಬಡವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತವೆ. ಆದರೆ, ಡಿಸಿಸಿ ಬ್ಯಾಂಕ್ ವಿಶ್ವಾಸದಿಂದ ಕಂಡು ಸಾಲ ನೀಡಿ ಜನಪರವಾಗಿ ಕೆಲಸ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ಸಾಲದಲ್ಲಿ ₹ 16 ಲಕ್ಷ ಕೋಟಿ ವಸೂಲಾಗದ ಸಾಲ (ಎನ್‌ಪಿಎ) ಆಗಿದೆ. ಈ ಬ್ಯಾಂಕ್‌ಗಳ ಸಾಲ ನೀತಿಯಲ್ಲೇ ದೋಷವಿದ್ದು, ಸಾಲಕ್ಕೆ ಬಡವರಲ್ಲಿ ಭದ್ರತೆ ಕೇಳುತ್ತಿವೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆದು ಅರ್ಹರಿಗೆ ಮದ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಸಾಲ ನೀಡುವುದು ಡಿಸಿಸಿ ಬ್ಯಾಂಕ್‌ನ ಗುರಿ. ಡಿಸಿಸಿ ಬ್ಯಾಂಕ್ ಬಡವರನ್ನು ವಿಶ್ವಾಸದಿಂದ ನೋಡಿ ಸಾಲ ನೀಡಲು ಬದ್ಧವಾಗಿದೆ’ ಎಂದರು.

‘ನೇಕಾರರಿಗೆ ಕಚ್ಚಾ ಸಾಮಗ್ರಿ ಒದಗಿಸುವ ಟ್ವಿಸ್ಟರ್‌ ಘಟಕವನ್ನು ಶಿಡ್ಲಘಟ್ಟದಲ್ಲಿ ಸ್ಥಾಪಿಸಲು ಮುಂದೆ ಬಂದಿರುವವರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅವರಿಗೆ ಇಲಾಖೆಯಿಂದ ಸಿಗುವ ಸಹಾಯಧನದ ಜತೆಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡುತ್ತೇವೆ. ಜವಳಿ ಇಲಾಖೆ ಆಯುಕ್ತರನ್ನು ಶಿಡ್ಲಘಟ್ಟಕ್ಕೆ ಕರೆಸಿ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಘಟಕ ಸ್ಥಾಪನೆ: ‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳ 2ನೇ ಶನಿವಾರ ಸಭೆ ಸೇರಿ ಚರ್ಚೆ ನಡೆಸಬೇಕು. ಜವಳಿ ಉದ್ದಿಮೆ ಆರಂಭಿಸಲು ಆಸಕ್ತಿಯಿರುವ ವಿವಿಧ ವರ್ಗದ ಪ್ರತಿನಿಧಿಗಳನ್ನು ಗುರುತಿಸಿ ಇಲಾಖೆ ತಾಂತ್ರಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ವೈಜ್ಞಾನಿಕ ರೀತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ. ನಂತರ ಅರ್ಹರಿಗೆ ಸಾಲ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯ ವೇಮಗಲ್, ನರಸಾಪುರದಲ್ಲಿ ವಿದೇಶಿ ಕಂಪನಿಗಳು ಕಾರ್ಖಾನೆ ಸ್ಥಾಪಿಸಿದ್ದರೂ ಸ್ಥಳೀಯರಿಗೆ ಪ್ರಯೋಜನ ಇಲ್ಲವಾಗಿದೆ. ಕಂಪನಿಗಳು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದರೂ ಗರಿಷ್ಠ 300 ಮಂದಿಗೆ ಕೆಲಸ ನೀಡಿವೆ. ಹೆಚ್ಚು ಜನರಿಗೆ ಕೆಲಸ ನೀಡಲು ಅವಕಾಶವಿರುವ ಕೈಮಗ್ಗ, ಜವಳಿ ಉದ್ದಿಮೆಯ 50 ಸಮಗ್ರ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.

ಸಾಲ ಕೊಡುತ್ತಿಲ್ಲ: ‘ಶಿಡ್ಲಘಟ್ಟದಲ್ಲಿ 1,200ಕ್ಕೂ ಹೆಚ್ಚು ಟ್ವಿಸ್ಟಿಂಗ್ ಘಟಕಗಳಿವೆ. ಹೊಸ ಘಟಕ ಸ್ಥಾಪನೆಗೆ ₹ 10 ಲಕ್ಷ ಬಂಡವಾಳ ಬೇಕು. ಆದರೆ, ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ’ ಎಂದು ನೂಲು ಬಿಚ್ಚಾಣಿಕೆದಾರ ನಾಗರಾಜ್ ದೂರಿದರು.

‘ಬ್ಯಾಂಕ್‌ಗಳ ಸಾಲ ಸೌಲಭ್ಯ ಕಲ್ಪಿಸಿದರೆ ನ್ಯಾಪ್‍ಕಿನ್ ತಯಾರಿಕೆ ಘಟಕ ಆರಂಭಿಸಲು ಸಿದ್ಧ’ ಎಂದು ಉದ್ದಿಮೆದಾರರಾದ ಸರಸ್ವತಮ್ಮ ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕಿ ಎಂ. ಸೌಮ್ಯ ಇಲಾಖೆಯ ಯೋಜನೆ ಹಾಗೂ ಸಹಾಯಧನ ಕುರಿತು ಮಾಹಿತಿ ನೀಡಿದರು. ಶಾಸಕ ಕೆ.ಶ್ರೀನಿವಾಸಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕ ಸೋಮಣ್ಣ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)