ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬದ್ಧತೆ ತೋರಿ

7
ಶಿಕ್ಷಕರಿಗೆ ನೂತನ ಡಿಡಿಪಿಐ ರತ್ನಯ್ಯ ಕಿವಿಮಾತು

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬದ್ಧತೆ ತೋರಿ

Published:
Updated:
Deccan Herald

ಕೋಲಾರ: ‘ಅನ್ನ ನೀಡುತ್ತಿರುವ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬದ್ಧತೆ ತೋರಿ. ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ ಗುರುವಿನ ಸ್ಥಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನೂತನ ಉಪ ನಿರ್ದೇಶಕ ಕೆ.ರತ್ನಯ್ಯ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಇಲ್ಲಿ ಶುಕ್ರವಾರ ಅಧಿಕಾರ ವಹಿಸಿಕೊಂಡು ಮಾತನಾಡಿ, ‘ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ನಾವು ನೀವು ನೆಮ್ಮದಿಯಿಂದ ಬದುಕಬಹುದು. ಸರ್ಕಾರಿ ಶಾಲೆಗಳು ಮುಚ್ಚಿದರೆ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತೇವೆ. ವೃತ್ತಿ ವಿಷಯವಾಗಿ ಏನೇ ಸಮಸ್ಯೆ ಇದ್ದರೂ ತಿಳಿಸಿ. ವಿನಾಕಾರಣ ತರಗತಿ ಬಿಟ್ಟು ಕಚೇರಿಗೆ ಅಲೆದರೆ ಸಹಿಸುವುದಿಲ್ಲ’ ಎಂದರು.

‘ಮಕ್ಕಳ ದಾಖಲಾತಿ ಕುಸಿತದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಈ ಶಾಲೆಗಳನ್ನು ಉಳಿಸಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿ. ಖಾಸಗಿ ಶಾಲೆಗಳ ಪೈಪೋಟಿ ಮೆಟ್ಟಿನಿಂತು ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಮತ್ತಷ್ಟು ಉತ್ತಮಗೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪರಿಶ್ರಮ ಅಗತ್ಯ. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಧ್ಯೇಯ. ಇದನ್ನು ಸಾಕಾರಗೊಳಿಸುವ ಹೊಣೆ ಇಲಾಖೆ ಮೇಲಿದೆ. ಗುರುವಿನ ಸ್ಥಾನಕ್ಕಿರುವ ಗೌರವವನ್ನು ಉಳಿಸಿಕೊಂಡು ಸಾಗಬೇಕು’ ಎಂದು ತಿಳಿಸಿದರು.

ದೇಶಕ್ಕೆ ಕಂಟಕ: ‘ಶಿಕ್ಷಕರದು ದೇಶ ಕಟ್ಟುವ ಕಾರ್ಯ. ಈ ಕಾರ್ಯದಲ್ಲಿ ಲೋಪವಾದರೆ ಇಡೀ ದೇಶಕ್ಕೆ ಕಂಟಕ. ಶಿಕ್ಷಕರನ್ನು ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಮಕ್ಕಳನ್ನು ಸಮಾಜಕ್ಕೆ ಹೊರೆಯಾಗಿಸದೆ ಅಮೂಲ್ಯ ಆಸ್ತಿಯಾಗಿ ಮಾಡಿ. ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿ. ಮಕ್ಕಳಿಗೆ ಸಮಸ್ಯೆಯಾಗುವ ಯಾವುದೇ ಘಟನೆಗೆ ಅವಕಾಶ ಕೊಡಬೇಡಿ. ಮಕ್ಕಳು ಶಾಲೆಯಿಂದ ಮನೆಗೆ ಹೋಗುವಾಗ ಮತ್ತು ಬರುವಾಗ ವಹಿಸಬೇಕಾದ ಎಚ್ಚರಿಕೆ ಕುರಿತು ಅರಿವು ಮೂಡಿಸಿ’ ಎಂದು ಹೇಳಿದರು.

ಜಿಲ್ಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸನ್, ಡಯಟ್ ಪ್ರಾಂಶುಪಾಲ ವಿಕ್ಟರ್, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಮಹಾದೇವಸ್ವಾಮಿ, ಲಿಪಿಕ ನೌಕರರ ಸಂಘದ ಅಧ್ಯಕ್ಷ ಸುರೇಶ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !