ಮಂಗಳವಾರ, ಆಗಸ್ಟ್ 20, 2019
27 °C

ಶಾಸಕರ ರಾಜೀನಾಮೆ | ‘ಸುಪ್ರೀಂ’ ಆದೇಶಕ್ಕೆ ಬದ್ಧ: ಸ್ಪೀಕರ್‌

Published:
Updated:

ಕೋಲಾರ: ‘ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ನಮ್ರತೆಯಿಂದ ಪಾಲಿಸುತ್ತೇನೆ. ಸಂವಿಧಾನದ ಆಶಯ ಹಾಗೂ ಸುಪ್ರೀಂ ಕೋರ್ಟ್‌ನ ವಿಶ್ವಾಸಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತೇನೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು.

ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಇಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌, ‘ಶಾಸಕರ ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಸಂಬಂಧ ನ್ಯಾಯಾಲಯ ಕಾಲಮಿತಿ ನಿಗದಿಪಡಿಸಿಲ್ಲ. ಹೀಗಾಗಿ ನನ್ನ ಜವಾಬ್ದಾರಿ ಹೆಚ್ಚಿದೆ’ ಎಂದರು.

‘ಗುರುವಾರ ವಿಶ್ವಾಸಮತ ಯಾಚನೆಗೆ ಅಡ್ಡಿಯಿಲ್ಲ. ಈ ಬಗ್ಗೆ ಯಾವುದೇ ಅನುಮಾನ ಬೇಡ. ರಾಜಕೀಯ ಲೆಕ್ಕಾಚಾರ ಪಕ್ಷಗಳಿಗೆ ಸಂಬಂಧಿಸಿದ್ದು. ಯಾರನ್ನೋ ತೃಪ್ತಿಪಡಿಸುವುದು ನನ್ನ ಕೆಲಸವಲ್ಲ. ಶಾಸಕರನ್ನು ಸದನಕ್ಕೆ ಕರೆಸುವುದು ನನ್ನ ಜವಾಬ್ದಾರಿಯಲ್ಲ. ಇದು ಪಕ್ಷಗಳ ಜವಾಬ್ದಾರಿ. ಸದನದಲ್ಲಿ ನಾನು ಅಂಪೈರ್‌ ಅಷ್ಟೇ’ ಎಂದು ಹೇಳಿದರು.

‘ಸಾಂದರ್ಭಿಕವಾಗಿ ಏನು ನಡೆಯುತ್ತದೆಯೋ, ಯಾರಿಗೆ ಏನು ಆಶಾಭಾವನೆ ಇದೆಯೋ ಹಾಗೂ ಗುರುವಾರ ಯಾವ ರೀತಿಯ ರಾಜಕೀಯ ಬೆಳವಣಿಗೆ ಆಗುತ್ತದೆಯೋ ನನಗೆ ಗೊತ್ತಿಲ್ಲ. ಸದನದ ನಿಯಮಾವಳಿ ಬಿಟ್ಟು ಕದಲುವುದಿಲ್ಲ. ಗೌರವಯುತವಾಗಿ ನಿಯಮಾವಳಿ ಪ್ರಕಾರ ನಡೆದುಕೊಳ್ಳುತ್ತೇನೆ. ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಳಂಬವಿಲ್ಲದೆ ಕೆಲಸ ನಿರ್ವಹಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

Post Comments (+)