ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗ ಸಮುದಾಯದ ಹಿತದೃಷ್ಟಿಗೆ ಸ್ಪರ್ಧೆ

Last Updated 7 ಡಿಸೆಂಬರ್ 2021, 13:12 IST
ಅಕ್ಷರ ಗಾತ್ರ

ಕೋಲಾರ: ‘ಒಕ್ಕಲಿಗ ಸಮುದಾಯದ ಹಿತದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾರರು ಆಶೀರ್ವಾದ ಮಾಡಬೇಕು’ ಎಂದು ಅಭ್ಯರ್ಥಿ ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಡಿ.12ರಂದು ಸಂಘಕ್ಕೆ ಚುನಾವಣೆ ನಡೆಯಲಿದ್ದು, 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಮುದಾಯದ ಮತದಾರರು ಎಂ.ಪ್ರಕಾಶ್, ಡಾ.ಡಿ.ರಮೇಶ್ ಹಾಗೂ ನನಗೆ ಮತ ಹಾಕಬೇಕು’ ಎಂದು ಕೋರಿದರು.

‘ಸಂಘದಲ್ಲಿ ಈ ಹಿಂದೆ ಅಧಿಕಾರದಲ್ಲಿದ ವ್ಯಕ್ತಿಗಳ ದುರಾಡಳಿತ, ವೈಫಲ್ಯದಿಂದ ಸಂಘ ಅವನತಿಯತ್ತ ಸಾಗುತ್ತಿದೆ. ಅವರ ಭ್ರಷ್ಟಾಚಾರದಿಂದ ಕಾರ್ಯಕಾರಿ ಸಮಿತಿಯು ಆಡಳಿತ ಕಳೆದುಕೊಂಡು ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದೆ. ಭವಿಷ್ಯದಲ್ಲಿ ಸಂಘಕ್ಕೆ ಇಂತಹ ಪರಿಸ್ಥಿತಿ ಬಾರದಂತೆ ಮತದಾರರು ಎಚ್ಚರ ವಹಿಸಬೇಕು’ ಎಂದರು.

‘ನಮಗೆ ಸಮುದಾಯದ ರಾಜಕೀಯ ನಾಯಕರು, ಮುಖಂಡರು ಬೆಂಬಲ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಮುದಾಯದ ವಿದ್ಯಾರ್ಥಿನಿಲಯಗಳಿಲ್ಲ. ರಾಜ್ಯ ಸಂಘವು ಈ ಭಾಗಕ್ಕೆ ಯಾವುದೇ ಸೌಕರ್ಯ ನೀಡದೆ ವಂಚಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮುದಾಯದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ 2001ರಲ್ಲಿ ಜಾಗ ಖರೀದಿಸಲಾಗಿತ್ತು. ಆ ಜಾಗ ಈಗ ಎಲ್ಲಿದೆ ಎಂದು ತೋರಿಸಲಿ. ಸಂಘದಲ್ಲಿ ಖಾಲಿಯಿರುವ ಹುದ್ದೆಗಳಿಗೆ ನಿಯಮಬಾಹಿರವಾಗಿ ಮೂರು ವ್ಯಕ್ತಿಗಳನ್ನು ನೇಮಿಸಲಾಗಿದೆ. ಸಂಘಕ್ಕೆ ಬರುವ ಅದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ. ಇದರಿಂದ ಸಂಘದ ಆರ್ಥಿಕ ಪರಿಸ್ಥಿತಿ ದಾರಿ ತಪ್ಪುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬದಲಾವಣೆ ಪರ್ವ: ‘ಸಂಘವು ಬಿಬಿಎಂಪಿಗೆ ತೆರಿಗೆ ಪಾವತಿಸಲಾಗದ ಸ್ಥಿತಿಯಲ್ಲಿದೆ. ಇದಕ್ಕೆ ಹಿಂದಿನ ಆಡಳಿತ ಮಂಡಳಿಯ ಕಾರ್ಯವೈಖರಿ ಕಾರಣ. ಎದುರಾಳಿಗಳು ಅವಳಿ ಜಿಲ್ಲೆಯ ಮತದಾರರಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಸಂಘದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಬದಲಾವಣೆ ಪರ್ವ ಆರಂಭವಾಗಿದೆ’ ಎಂದು ಅಭ್ಯರ್ಥಿ ಎಂ.ಪ್ರಕಾಶ್‌ ಹೇಳಿದರು.

‘ಚುನಾವಣೆ ಎದುರಿಸುವ ಶಕ್ತಿಯಿಲ್ಲದ ವ್ಯಕ್ತಿಗಳು ನಮ್ಮ ವಿರುದ್ಧ ನಕಲಿ ಕರಪತ್ರ ಮುದ್ರಿಸಿ ಮತದಾರರ ದಿಕ್ಕು ತಪ್ಪಿಸುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿ ತಕ್ಕ ಪಾಠ ಕಲಿಸಬೇಕು’ ಎಂದು ಗುಡುಗಿದರು.

ಅಭ್ಯರ್ಥಿಯಾದ ವೈದ್ಯ ಡಾ.ಡಿ.ಕೆ.ರಮೇಶ್, ಒಕ್ಕಲಿಗ ಸಮುದಾಯದ ಮುಖಂಡರಾದ ಚಿದಾನಂದ, ವಿನೋದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT