ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ನಂಜೇಗೌಡ ವಿರುದ್ಧ ದೂರು

ಕೋಚಿಮುಲ್‌ ಚುನಾವಣೆ– ಎಂಪಿಸಿಎಸ್‌ ಅಧ್ಯಕ್ಷರ ಡೆಲಿಗೇಟ್‌ ಫಾರಂ ಕಸಿದುಕೊಂಡ ಆರೋಪ
Last Updated 4 ಮೇ 2019, 1:50 IST
ಅಕ್ಷರ ಗಾತ್ರ

ಕೋಲಾರ: ‘ನಮ್ಮ ಗುರುತಿನ ಚೀಟಿ ಹಾಗೂ ಡೆಲಿಗೇಟ್ ಫಾರಂಗಳನ್ನು ಶಾಸಕ ಕೆ.ವೈ.ನಂಜೇಗೌಡ ಮತ್ತು ಅವರ ಬೆಂಬಲಿಗರು ಕಿತ್ತುಕೊಂಡಿದ್ದಾರೆ’ ಎಂದು ಆರೋಪಿಸಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ (ಎಂಪಿಸಿಎಸ್) ಅಧ್ಯಕ್ಷರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ದೂರು ನೀಡಿದರು.

ಮಾಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾದ ಎಂಪಿಸಿಎಸ್ ಅಧ್ಯಕ್ಷರು, ‘ಮೇ 13ರಂದು ಕೋಚಿಮುಲ್‌ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಕೋಚಿಮುಲ್‌ ಹಾಲಿ ಅಧ್ಯಕ್ಷ ಹಾಗೂ ಶಾಸಕ ನಂಜೇಗೌಡರು ದೌರ್ಜನ್ಯದಿಂದ ಗುರುತಿನ ಚೀಟಿ ಕಿತ್ತುಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಮಾಲೂರು ತಾಲ್ಲೂಕಿನಲ್ಲಿ 88 ಎಂಪಿಸಿಎಸ್‌ಗಳು ಮತದಾನಕ್ಕೆ ಅರ್ಹವಿದ್ದು, ಈ ಪೈಕಿ 50ಕ್ಕೂ ಹೆಚ್ಚು ಸಂಘಗಳ ಅಧ್ಯಕ್ಷರ ಗುರುತಿನ ಚೀಟಿಯನ್ನು ನಂಜೇಗೌಡರ ಬೆಂಬಲಿಗರು ಜೆರಾಕ್ಸ್‌ ಮಾಡಿಸಿಕೊಂಡು ಕೊಡುವುದಾಗಿ ಹೇಳಿ ಪಡೆದುಕೊಂಡಿದ್ದರು. ಇದೀಗ ಮತ ಹಾಕುವಂತೆ ಮತ್ತು ತಮ್ಮ ಜತೆಗೆ ಪ್ರವಾಸ ಬರುವಂತೆ ಒತ್ತಡ ಹಾಕುತ್ತಿದ್ದಾರೆ. ಅವರ ಮಾತು ಕೇಳದಿದ್ದರೆ ಗುರುತಿನ ಚೀಟಿ ಹರಿದು ಹಾಕುವುದಾಗಿ ಬೆದರಿಸುತ್ತಿದ್ದಾರೆ’ ಎಂದು ದೂರಿದರು.

ದೂರು ಸ್ವೀಕರಿಸಿದ ಜಿಲ್ಲಾಧಿಕಾರಿ, ‘ಸಹಕಾರಿ ಕಾಯ್ದೆ ಪ್ರಕಾರ ಮತ್ತೊಂದು ಡೆಲಿಗೇಟ್ ಫಾರಂ ನೀಡಲಾಗುವುದು. ಈಗಾಗಲೇ ಕೊಟ್ಟಿರುವ ಫಾರಂ ಕಳೆದು ಹೋಗಿರುವ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಶ್ನಿಸುವವರಿಲ್ಲ: ‘ಶಾಸಕರಾಗಿ ಆಯ್ಕೆಯಾಗಿ ಒಂದು ವರ್ಷ ಪೂರೈಸದ ನಂಜೇಗೌಡರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರ ದೌರ್ಜನ್ಯ ಪ್ರಶ್ನಿಸುವವರಿಲ್ಲ’ ಎಂದು ಮಾಜಿ ಶಾಸಕ ಮಂಜುನಾಥ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕರ ಹಿಂಬಾಲಕರು ದಲಿತರು, ಬಡವರು, ಹಿರಿಯರೆಂದು ನೋಡದೆ ಎಂಪಿಸಿಎಸ್ ಅಧ್ಯಕ್ಷರನ್ನು ಬೆದರಿಸಿ ಬಲವಂತವಾಗಿ ಡೆಲಿಗೇಟ್ ಫಾರಂ ಮತ್ತು ಗುರುತಿನ ಚೀಟಿ ಕಿತ್ತುಕೊಂಡು ಮತ ಹಾಕದಂತೆ ತಡೆಯೊಡ್ಡಿದ್ದಾರೆ. 40ಕ್ಕೂ ಹೆಚ್ಚು ಅಧ್ಯಕ್ಷರು ಅಂಗಲಾಚುವ ಪರಿಸ್ಥಿತಿಗೆ ತಲುಪಿದ್ದಾರೆ’ ಎಂದು ಹೇಳಿದರು.

‘ಶಾಸಕರ ದಬ್ಬಾಳಿಕೆ ಸಂಬಂಧ ಈಗಾಗಲೇ 4 ದೂರು ನೀಡಲಾಗಿದ್ದು, 3 ಅಧ್ಯಕ್ಷರ ಗುರುತಿನ ಚೀಟಿ ಹಿಂದಿರುಗಿಸಲಾಗಿದೆ. ಶಾಸಕರ ಕೈಗೊಂಬೆಯಾಗಿರುವ ಸ್ಥಳೀಯ ಪೊಲೀಸರು ಎಂಪಿಸಿಎಸ್‌ ಅಧ್ಯಕ್ಷರನ್ನೇ ಬೆದರಿಸುತ್ತಿದ್ದಾರೆ. ಅಧ್ಯಕ್ಷರ ಗುರುತಿನ ಚೀಟಿ ಮತ್ತು ಡೆಲಿಗೇಟ್‌ ಫಾರಂ ವಾಪಸ್‌ ಕೊಡಿಸದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಗೂಂಡಾ ವರ್ತನೆ: ‘ನಂಜೇಗೌಡರು ಶಾಸಕ ಸ್ಥಾನದ ಘನತೆ ಮರೆತು ಗೂಂಡಾ ರೀತಿ ವರ್ತಿಸುತ್ತಿದ್ದಾರೆ. ಚುನಾವಣೆ ವೇಳೆ ಪ್ರವಾಸ ಕರೆದೊಯ್ಯುವುದು, ಹಣದ ಆಮಿಷವೊಡ್ಡುವುದು ಸಹಜ. ಗುರುತಿನ ಚೀಟಿ ಹರಿದು ಹಾಕಿ ದೌರ್ಜನ್ಯ ನಡೆಸಿದ ಉದಾಹರಣೆ ಇಲ್ಲ. ಆದರೆ, ಶಾಸಕರು ಸರ್ವಾಧಿಕಾರಿಯಂತೆ ಎಂಪಿಸಿಎಸ್‌ ಅಧ್ಯಕ್ಷರ ಮೇಲೆ ದರ್ಪ ತೋರುತ್ತಿದ್ದಾರೆ’ ಎಂದು ಸ್ಪರ್ಧೆಯ ಆಕಾಂಕ್ಷಿ ಪ್ರಸನ್ನ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT