ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ–ವಿಜಲ್ ಆ್ಯಪ್‌ಗೆ ದೂರು ಸಲ್ಲಿಸಿ

ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ
Last Updated 19 ಮಾರ್ಚ್ 2019, 15:24 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಚುನಾವಣೆ ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕರಿಗೆ ಚುನಾವಣಾ ಅಕ್ರಮ ಕಂಡುಬಂದರೆ ಸಿ–ವಿಜಲ್ ಆ್ಯಪ್‌ಗೆ ದೂರು ಸಲ್ಲಿಸಬೇಕು’ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿ–ವಿಜಲ್ ಆ್ಯಪ್ ಮೂಲಕ ದೂರು ನೀಡುವ ಸಾರ್ವಜನಿಕರ ವಿವರವನ್ನು ಗೋಪ್ಯವಾಗಿ ಇಡಲಾಗುವುದು. ಹೀಗಾಗಿ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಈವರೆಗೆ ₹ 6.48 ಲಕ್ಷ ಜಪ್ತಿ ಮಾಡಲಾಗಿದೆ. ಅಕ್ರಮ ಮದ್ಯ ಸಾಗಣೆ ಸಂಬಂಧ 98 ಪ್ರಕರಣ ದಾಖಲಾಗಿದ್ದು, ₹ 1.11 ಲಕ್ಷ ಮೌಲ್ಯದ ಮದ್ಯ ಮತ್ತು ₹ 2.25 ಲಕ್ಷ ಬೆಲೆ ಬಾಳುವ 6 ಬೈಕ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಚುನಾವಣೆ ಘೋಷಣೆಯಾದ ದಿನದಿಂದಲೇ ನೀತಿಸಂಹಿತೆ ಜಾರಿಯಾಗಿದೆ. ಮಂಗಳವಾರದಿಂದ (ಮಾರ್ಚ್‌ 19) ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಉಮೇದುವಾರಿಕೆ ಸಲ್ಲಿಕೆಗೆ ಮಾರ್ಚ್‌ 26ವರೆಗೆ ಕಾಲಾವಕಾಶ ನೀಡಲಾಗಿದೆ. 7 ದಿನಗಳ ಕಾಲ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಸಹಕರಿಸಬೇಕು’ ಎಂದು ಕೋರಿದರು.

‘ಮತದಾರರು ಭಯವಿಲ್ಲದೆ ಮುಕ್ತ, ನ್ಯಾಯಸಮ್ಮತವಾಗಿ ಮತದಾನ ಮಾಡಲು ಕ್ರಮ ಕೈಗೊಳ್ಳಲಾಗುವುದು. ನೀತಿಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿದ್ದು, ಪ್ರತಿ ಮತಗಟ್ಟೆಗೂ ಕುಡಿಯುವ ನೀರು, ವಿದ್ಯುತ್, ಹೊರಗೆ ನೆರಳಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವೀಕ್ಷಕರ ನೇಮಕ: ‘ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರಕ್ಕೆ 3 ವೀಕ್ಷಕರನ್ನು ನೇಮಿಸಲಾಗಿದ್ದು, ಸದ್ಯದಲ್ಲೇ ಮತ್ತೊಬ್ಬರೂ ನೇಮಕಗೊಳ್ಳಲಿದ್ದಾರೆ. ಸಾರ್ವಜನಿಕರು ಚುನಾವಣಾ ವೀಕ್ಷಕರಿಗೆ ದೂರು ನೀಡಬಹುದಾಗಿದ್ದು, ಅವರ ದೂರವಾಣಿ ಸಂಖ್ಯೆ ಕೊಡುತ್ತೇವೆ’ ಎಂದು ಹೇಳಿದರು.

‘4 ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ಜನರಲ್ ವೀಕ್ಷಕ ಮತ್ತು ಇಬ್ಬರು ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಸದ್ಯ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಜನರಲ್ ವೀಕ್ಷಕರಾಗಿ ಜಾರ್ಖಂಡ್‌ನ ಗೃಹ ಇಲಾಖೆ ವಿಶೇಷ ಕಾರ್ಯದರ್ಶಿ ಇಕ್ಬಾಲ್ ಆಲಂಬ್ ಅನ್ಸಾರಿ (ಐಎಎಸ್ ಅಧಿಕಾರಿ) ನೇಮಕಗೊಂಡಿದ್ದಾರೆ’ ಎಂದರು.

‘ಚುನಾವಣಾ ವೆಚ್ಚ ವೀಕ್ಷಕರಾಗಿ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ರಾಜಸ್ಥಾನದ ಜಿ.ವಿಕಾಸ್‌ಕುಮಾರ್‌ ಹಾಗೂ ಮುಳಬಾಗಿಲು, ಮಾಲೂರು, ಕೆಜಿಎಫ್, ಬಂಗಾರಪೇಟೆ ಕ್ಷೇತ್ರಕ್ಕೆ ಗುಜರಾತ್‌ನ ಮಿಹಿಲ್ ನೇಮಕಗೊಂಡಿದ್ದಾರೆ. ವೀಕ್ಷಕರಿಗೆ ಜಿಲ್ಲಾಡಳಿತ ಭವನದಲ್ಲೇ ಕಚೇರಿ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT