ಶನಿವಾರ, ಅಕ್ಟೋಬರ್ 19, 2019
22 °C
ಅಭಿನಂದನಾ ಸಮಾರಂಭ

ಕಾಲಮಿತಿಯಲ್ಲಿ ನೀರಾವರಿ ಯೋಜನೆ ಪೂರ್ಣ: ಉಸ್ತುವಾರಿ ಸಚಿವ ನಾಗೇಶ್‌ ಭರವಸೆ

Published:
Updated:
Prajavani

ಕೋಲಾರ: ‘ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆಗೆ ಜಾರಿಗೊಳಿಸಿರುವ ಯೋಜನೆಗಳ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ನೀರು ಹರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಭರವಸೆ ನೀಡಿದರು.

ಅವರ ಅಭಿಮಾನಿಗಳ ಒಕ್ಕೂಟವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಜಿಲ್ಲೆಗೆ ನೀರು ಬಂದರೆ ಬೃಹತ್ ಉದ್ಯಮಗಳು ಬಂಡವಾಳ ಹೂಡಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಕೆ.ಸಿ ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ಸಮಗ್ರವಾಗಿ ಜಾರಿ ಮಾಡಲು ಪಣ ತೊಡಲಾಗಿದೆ’ ಎಂದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಈಗಾಗಲೇ 30 ಕೆರೆ ತುಂಬಿವೆ. ಯೋಜನೆಯಿಂದ ಬರುತ್ತಿರುವ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಕೆರೆಗಳು ತುಂಬಲು ಹೆಚ್ಚು ಕಾಲಾವಕಾಶ ಬೇಕು. ಹೀಗಾಗಿ ನೀರಿನ ಪ್ರಮಾಣವನ್ನು 400 ಎಂಎಲ್‌ಡಿಗೆ ಹೆಚ್ಚಿಸಲು ಮತ್ತು ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಸಂಬಂಧ ಸಂಸದರೊಂದಿಗೆ ಚರ್ಚಿಸುತ್ತೇನೆ’ ಎಂದು ಹೇಳಿದರು.

‘ಎತ್ತಿನಹೊಳೆ ಯೋಜನೆ ನೀರು ಬಂದರೆ ಜಿಲ್ಲೆಯ ನೀರಿನ ಸಮಸ್ಯೆ ಬಹುತೇಕ ಬಗೆಹರಿಯುತ್ತದೆ. ಮನೆ ಮನೆಗೂ ನಲ್ಲಿ ಮೂಲಕ ನೀರು ಕೊಡಬೇಕೆಂಬುದು ನನ್ನ ಆಸೆ. ಆ ನಂತರ ಟ್ಯಾಂಕರ್‌ ಮಾಫಿಯಾಕ್ಕೆ ಕಡಿವಾಣ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಉದ್ಯೋಗ ಮೇಳ: ‘ಮುಳಬಾಗಿಲು ತಾಲ್ಲೂಕಿನಲ್ಲಿ ಇತ್ತೀಚೆಗೆ ನಡೆದ ಮಿನಿ ಉದ್ಯೋಗ ಮೇಳದಲ್ಲಿ 900 ಮಂದಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ಸಿಕ್ಕಿದೆ. ಅದೇ ಮಾದರಿಯಲ್ಲಿ ಜಿಲ್ಲಾ ಕೇಂದ್ರದಲ್ಲೂ ಸದ್ಯದಲ್ಲೇ ಉದ್ಯೋಗ ಮೇಳ ನಡೆಸಿ -5 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸುತ್ತೇವೆ’ ಎಂದು ವಿವರಿಸಿದರು.

‘ಕೋಲಾರವು ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿದ್ದರೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಹೀಗಾಗಿ ನಗರವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಜಿಲ್ಲಾ ಕೇಂದ್ರದ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡುತ್ತೇವೆ. ವರ್ತುಲ ರಸ್ತೆ ನಿರ್ಮಿಸಿ ಎಲ್ಲಾ ತಾಲ್ಲೂಕುಗಳ ಸಂಪರ್ಕಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಸಿ.ಎಂ ಜತೆ ಚರ್ಚೆ: ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಬಿಡುಗಡೆಯಾದ ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ ಜಿಲ್ಲೆಗೆ ಅನ್ಯಾಯವಾಗದಂತೆ ಕ್ರಮ ವಹಿಸುತ್ತೇನೆ’ ಎಂದರು.

‘ಅಬಕಾರಿ ಇಲಾಖೆ ಆದಾಯ ಹೆಚ್ಚಿಸಲು ಹೊಸ ಯೋಜನೆ ರೂಪಿಸಲಾಗುವುದು. ನಿಗದಿತ ಸಮಯ ಮೀರಿ ವಹಿವಾಟು ನಡೆಸುವ ಮದ್ಯದಂಗಡಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

Post Comments (+)