ಮಂಗಳವಾರ, ಡಿಸೆಂಬರ್ 10, 2019
19 °C
ಪೌರಾಡಳಿತ ನಿರ್ದೇಶನಾಲಯ ಜಂಟಿ ನಿರ್ದೇಶಕಿ ವಿಜಯಲಕ್ಷ್ಮೀ ಸೂಚನೆ

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯ ಹಣಕಾಸು ನಿಧಿ (ಎಸ್‌ಎಫ್‌ಸಿ), 14ನೇ ಹಣಕಾಸು ಆಯೋಗದ ಅನುದಾನ, ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳ ಪ್ರಗತಿ ಹೆಚ್ಚಿಸಿ’ ಎಂದು ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ವಿಜಯಲಕ್ಷ್ಮೀ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ನಗರಸಭೆ, ಪುರಸಭೆ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ಶುಕ್ರವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿ, ‘ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಈ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

‘ಬಾಕಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಜನವರಿ ತಿಂಗಳಲ್ಲಿ ಜಿಲ್ಲೆಗೆ ಬಂದು ಪ್ರಗತಿ ಪರಿಶೀಲನೆ ಮಾಡುತ್ತೇನೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಂಡಿರಬೇಕು’ ಎಂದು ಹೇಳಿದರು.

‘ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ. ಅಗತ್ಯವಿರುವ ಕಡೆ ಖಾಸಗಿ ಕೊಳವೆ ಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿ. ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ’ ಎಂದರು.

ತೆರಿಗೆ ಸಂಗ್ರಹಿಸಿ: ‘ಆಸ್ತಿ ತೆರಿಗೆ, ನೀರಿನ ತೆರಿಗೆ ಸೇರಿದಂತೆ ಎಲ್ಲಾ ರೀತಿಯ ತೆರಿಗೆಗಳನ್ನು ನಿಯಮಿತವಾಗಿ ವಸೂಲಿ ಮಾಡಬೇಕು. ಈ ತೆರಿಗೆಗಳಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಆದಾಯ ಬರುತ್ತದೆ. ಆದ ಕಾರಣ ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ತೋರಬೇಡಿ. ಯಾವುದೇ ಮುಲಾಜಿಲ್ಲದೆ ತೆರಿಗೆ ಸಂಗ್ರಹಿಸಿ’ ಎಂದರು.

‘ರಸ್ತೆ, ನೀರು ಸೇರಿದಂತೆ ಜನರಿಗೆ ಮೂಲಸೌಕರ್ಯಗಳ ಸಮಸ್ಯೆಯಾಗದಂತೆ ಕೆಲಸ ಮಾಡಬೇಕು. ನಗರ ಮತ್ತು ಪಟ್ಟಣಗಳನ್ನು ಸುಂದರವಾಗಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮುಖ್ಯ. ಜನರ ಸಹಕಾರ ಪಡೆದು ಸ್ವಚ್ಛತಾ ಕಾರ್ಯ ನಡೆಸಿ’ ಎಂದು ಹೇಳಿದರು.

ಮನೆ ನಿರ್ಮಾಣ: ‘ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಜಿಲ್ಲೆಯ 213 ಕಾಯಂ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಲಾಗುತ್ತಿದ್ದು, ಕೋಲಾರದಲ್ಲಿ 2, ಕೆಜಿಎಫ್ 5 ಮತ್ತು ಬಂಗಾರಪೇಟೆಯಲ್ಲಿ 14 ಮನೆ ಪೂರ್ಣಗೊಂಡಿವೆ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಮಾಹಿತಿ ನೀಡಿದರು.

‘₹ 14.31 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿಯಿದ್ದು, ₹ 8.96 ಕೋಟಿ ವಸೂಲಿ ಮಾಡಲಾಗಿದೆ. ಬಾಕಿ ತೆರಿಗೆಯನ್ನು ಶೀಘ್ರವೇ ವಸೂಲಿ ಮಾಡುತ್ತೇವೆ. ₹ 7.43 ಕೋಟಿ ನೀರಿನ ತೆರಿಗೆಯಲ್ಲಿ ₹ 1.97 ಕೋಟಿ ಸಂಗ್ರಹವಾಗಿದೆ. ₹ 5.46 ಕೋಟಿ ಬಾಕಿಯಿದ್ದು, ಕೂಡಲೇ ವಸೂಲಿ ಮಾಡುತ್ತೇವೆ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್, ಕೆಜಿಎಫ್‌ ನಗರಸಭೆ ಆಯುಕ್ತ ರಾಜು, ಮುಳಬಾಗಿಲು ನಗರಸಭೆ ಆಯುಕ್ತ ಶ್ರೀನಿವಾಸ್, ಬಂಗಾರಪೇಟೆ ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ಮಾಲೂರು ಪುರಸಭೆ ಮುಖ್ಯಾಧಿಕಾರಿ ಪ್ರಸಾದ್, ಶ್ರೀನಿವಾಸಪುರ ಪುರಸಭೆ ಮುಖ್ಯಾಧಿಕಾರಿ ಮೋಹನ್ ಹಾಜರಿದ್ದರು.

ಅಂಕಿ ಅಂಶ.....
* 213 ಕಾಯಂ ಪೌರ ಕಾರ್ಮಿಕರಿಗೆ ಮನೆ
* ₹ 14.31 ಕೋಟಿ ಆಸ್ತಿ ತೆರಿಗೆ ಗುರಿ
* ₹ 8.96 ಕೋಟಿ ಆಸ್ತಿ ತೆರಿಗೆ ವಸೂಲಿ
* ₹ 1.97 ಕೋಟಿ ನೀರಿನ ತೆರಿಗೆ ಸಂಗ್ರಹ

ಪ್ರತಿಕ್ರಿಯಿಸಿ (+)