ಶನಿವಾರ, ಆಗಸ್ಟ್ 24, 2019
28 °C
ಹಣಕಾಸು ನೆರವಿಗೆ ಪ್ರಸ್ತಾವ ಸಲ್ಲಿಕೆ: ಸಂಸದ ಮುನಿಸ್ವಾಮಿ ಹೇಳಿಕೆ

ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣ: ಸಂಸದ ಮುನಿಸ್ವಾಮಿ

Published:
Updated:

ಕೋಲಾರ: ‘ಸಂಸದನಾಗಿ ಆಯ್ಕೆಯಾದ ಮೇಲೆ ಸುಮ್ಮನೆ ಕುಳಿತಿಲ್ಲ. ಪಕ್ಷಾತೀತವಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು, ಕೇಂದ್ರದ ಯೋಜನೆಗಳ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಹೆಚ್ಚಿನ ಹಣಕಾಸು ನೆರವಿಗೆ ಪ್ರಸ್ತಾವ ಸಲ್ಲಿಸುತ್ತಿದ್ದೇನೆ’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನದಿ ನಾಲೆಗಳಿಲ್ಲದೆ ಜನ ತೊಂದರೆಗೆ ಸಿಲುಕಿದ್ದಾರೆ. ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸಲು ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ನೀಡಿರುವಂತೆಯೇ ಜಿಲ್ಲೆಗೂ ಪಾಲು ಕೇಳಲಾಗಿದೆ. ನದಿ ಜೋಡಣೆ ಜತೆಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಚುರುಕುಗೊಳಿಸಬೇಕೆಂದು ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡಿದ್ದೇನೆ’ ಎಂದು ಹೇಳಿದರು.

‘ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1 ಲಕ್ಷ ಫಲಾನುಭವಿಗಳ ಪೈಕಿ 70 ಸಾವಿರ ಮಂದಿಗೆ ಕೇಂದ್ರದಿಂದ ₹ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹ 4 ಸಾವಿರ ನೀಡಲಾಗಿದೆ. ರಾಜ್ಯದಲ್ಲಿ ನೆರೆ ಹಾವಳಿಗೆ ಸಿಲುಕಿರುವ ಜಿಲ್ಲೆಗಳಲ್ಲಿ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ, ದುರಸ್ತಿಗೆ ₹ 1 ಲಕ್ಷ ಹಾಗೂ ಬಾಡಿಗೆ ಮನೆಯವರಿಗೆ ₹ 5 ಸಾವಿರ ನೀಡಲು ಮುಖ್ಯಮಂತ್ರಿ ಕ್ರಮ ಕೈಗೊಂಡಿದ್ದಾರೆ’ ಎಂದು ವಿವರಿಸಿದರು.

‘ದೇಶದಲ್ಲಿ ಸಾಕಷ್ಟು ರೈಲ್ವೆ ಕೋಚ್ ಕಾರ್ಖಾನೆಗಳಿದ್ದು, ಉತ್ಪಾದನೆ ಹೆಚ್ಚಿದೆ. ಹೀಗಾಗಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಬದಲಿಗೆ ವರ್ಕ್‌ಶಾಪ್‌ ಆರಂಭಿಸುವಂತೆ ರೈಲ್ವೆ ಸಚಿವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಚಿನ್ನದ ಗಣಿ ಪುನರ್ ಆರಂಭ ಹಾಗೂ ಜಿಲ್ಲೆಯಲ್ಲಿ ₹ 40 ಕೋಟಿ ವೆಚ್ಚದಲ್ಲಿ ಜವಳಿ ಪಾರ್ಕ್‌ ಆರಂಭಿಸುವ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಗೌರವ ತರುವುದಿಲ್ಲ: ‘ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಅವರು 28 ವರ್ಷ ಸಂಸದರಾಗಿದ್ದರೂ ಜಿಲ್ಲೆಗಾಗಿ ಏನೂ ಮಾಡಲಿಲ್ಲ. ಈಗ ಅವರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ರೈಲ್ವೆ ಕೋಚ್ ಕಾರ್ಖಾನೆ ಆರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದು ಅವರ ಹಿರಿತನಕ್ಕೆ ಗೌರವ ತರುವುದಿಲ್ಲ. ಇನ್ನಾದರೂ ಗೌರವಯುತವಾಗಿ ನಡೆದುಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಈ ಬಾರಿಯೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹೀಗಾಗಿ ಸರ್ಕಾರ ರೈತರಿಗೆ ಆದ್ಯತೆ ಮೇರೆಗೆ ಪರಿಹಾರ ಕಲ್ಪಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದರು.

ಕೊರತೆಯಿಲ್ಲ: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈಗಾಗಲೇ 2 ಕಡೆ ಗೋಶಾಲೆ ಮತ್ತು 3 ಕಡೆ ಮೇವು ಬ್ಯಾಂಕ್ ಆರಂಭಿಸಲಾಗಿದೆ. ಬರ ಪರಿಹಾರಕ್ಕೆ ಅನುದಾನದ ಕೊರತೆಯಿಲ್ಲ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಪಷ್ಟಪಡಿಸಿದರು.

Post Comments (+)