ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಹಾಸ್ಟೆಲ್‌ಗಳ ಸ್ಥಿತಿ ಶೋಚನೀಯ

ಸಭೆಯಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ಬೇಸರ
Last Updated 23 ಆಗಸ್ಟ್ 2019, 14:18 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿನಿಲಯಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಸದ್ಯದಲ್ಲೇ ವರದಿ ಸಲ್ಲಿಸಿ ಹಾಸ್ಟೆಲ್‌ಗಳ ಸುಧಾರಣೆಗೆ ಒತ್ತಾಯಿಸಲಾಗುವುದು’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎನ್‌.ಕೃಷ್ಣಮೂರ್ತಿ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ, ‘ಸರ್ಕಾರದ ಸೂಚನೆಯಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಕೊಟ್ಟು ಆಹಾರ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿ, ಅಂಗನವಾಡಿ ಕೇಂದ್ರಗಳು, ಬಿಸಿಯೂಟ ಯೋಜನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

‘ಈಗಾಗಲೇ ರಾಜ್ಯದ ಜಿಲ್ಲೆಗಳಲ್ಲಿ ಪರಿಶೀಲನೆ ಮಾಡಲಾಗಿದೆ. ಈ ಪೈಕಿ ಕೋಲಾರ ಜಿಲ್ಲೆಯ ಅಂಗನವಾಡಿಗಳು ಹಾಗೂ ಹಾಸ್ಟೆಲ್‌ಗಳ ಪರಿಸ್ಥಿತಿ ಉತ್ತಮವಾಗಿಲ್ಲ. ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಯಲ್ಲಿ ಸರ್ಕಾರಿ ಹಾಸ್ಟೆಲ್‌ಗಳನ್ನು ಸುಸಜ್ಜಿತ ಹೋಟೆಲ್‌ ಮಾದರಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ನೆಲಮಂಗಲದ ಹಾಸ್ಟೆಲ್‌ ವ್ಯವಸ್ಥೆ ಆಶ್ಚರ್ಯಪಡುವಂತಿದೆ. ಅಲ್ಲಿ ಮಕ್ಕಳಿಗೆ ಯಾವ ಕೊರತೆಯೂ ಇಲ್ಲ’ ಎಂದು ವಿವರಿಸಿದರು.

‘ಕೋಲಾರ ಜಿಲ್ಲಾ ಕೇಂದ್ರ ಸೇರಿದಂತೆ ಮಾಲೂರು, ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿನ ಆಹಾರ ಸಂಗ್ರಹಣೆಯ ಗೋದಾಮು ಮತ್ತು ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಿದ್ದೇನೆ. ಸಾಕಷ್ಟು ಅನಾನುಕೂಲತೆ ಇರುವುದು ಕಂಡುಬಂದಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾ ಕೇಂದ್ರದ ನಚಿಕೇತ ವಿದ್ಯಾರ್ಥಿನಿಲಯ ಮತ್ತು ಕೋರ್ಟ್ ವೃತ್ತದಲ್ಲಿನ ಬಾಲಕಿಯರ ಹಾಸ್ಟೆಲ್‌ ಸ್ಥಿತಿ ಉತ್ತಮವಾಗಿಲ್ಲ. ನಚಿಕೇತ ವಿದ್ಯಾರ್ಥಿನಿಲಯವು ತುಂಬಾ ಹಳೆಯ ಕಟ್ಟಡವಾಗಿದ್ದು, ಅಲ್ಲಿ ಇರಲು ಮಕ್ಕಳಿಗೆ  ಕಷ್ಟ ಎನಿಸುತ್ತಿದೆ. ಆ ಹಾಸ್ಟೆಲ್ ಕಟ್ಟಡ ಪುನಶ್ಚೇತನಗೊಳಿಸಬೇಕಿದ್ದು, ಸಂಸದರ ನಿಧಿಯಿಂದ ಅನುದಾನ ಕೊಡುವುದಾಗಿ ಜಿಲ್ಲೆಯ ಸಂಸದರು ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಮಸ್ಯೆ ಪರಿಹರಿಸಿ: ‘ಕೋರ್ಟ್ ವೃತ್ತದಲ್ಲಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಬೆಡ್, ಬೆಡ್‌ಶೀಟ್‌, ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಇರುವುದು ಗೊತ್ತಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಈ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಸೂಚಿಸಿದರು.

‘ಶ್ರೀನಿವಾಸಪುರ ಪಟ್ಟಣದ ಬಾಲಕರ ಹಾಸ್ಟೆಲ್‌ನಲ್ಲಿ ಶೌಚಾಲಯ ಸಮಸ್ಯೆಯಿದೆ. ಮಕ್ಕಳಿಗೆ ಸ್ನಾನಗೃಹವಿಲ್ಲ, ಜತೆಗೆ ಹಾಸ್ಟೆಲ್‌ನಲ್ಲಿ ಸೊಳ್ಳೆ ಕಾಟ ಹೆಚ್ಚಿದ್ದು, ಸೊಳ್ಳೆ ಪರದೆ ಹರಿದಿರುವುದರಿಂದ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತದೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಶೀಘ್ರವೇ ಹೊಸ ಸೊಳ್ಳೆ ಪರದೆ ನೀಡಬೇಕು’ ಎಂದು ತಿಳಿಸಿದರು.

ವರದಿ ಸಲ್ಲಿಸಿ: ‘ಕೋಲಾರ ತಾಲ್ಲೂಕಿನ ಗದ್ದೆಕಣ್ಣೂರು ಗ್ರಾಮದ ಅಂಗನವಾಡಿಯಲ್ಲಿ ದಲಿತ ಮಕ್ಕಳು ಮಾತ್ರ ಕಲಿಯುತ್ತಿದ್ದು ಇತರೆ ವರ್ಗದ ಮಕ್ಕಳು ಅಂಗನವಾಡಿಗೆ ಬರುತ್ತಿಲ್ಲ ಎಂಬ ದೂರು ಬಂದಿತ್ತು. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಜತೆಗೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ. ಮೇಲು ಕೀಳು ಭಾವನೆ ಬಿಟ್ಟು ಎಲ್ಲಾ ವರ್ಗದ ಮಕ್ಕಳು ಅಂಗನವಾಡಿಯಲ್ಲಿ ಒಟ್ಟಿಗೆ ಕಲಿಯುವ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

‘ಅಂಗನವಾಡಿಗಳು, ಹಾಸ್ಟೆಲ್‌ಗಳು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನಾವು ಪ್ರತಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೇವೆ. ಎಲ್ಲೆಡೆ ಸುಧಾರಣೆಯಾಗಿದೆ’ ಎಂದು ಆಯೋಗದ ಸದಸ್ಯ ಎಚ್.ವಿ.ಶಿವಶಂಕರ್ ಹೇಳಿದರು.

ಆಯೋಗದ ಸದಸ್ಯರಾದ ಮಂಜುಳಾಬಾಯಿ, ಬಿ.ಬಿ.ಹಸಬಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT