ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಸಿ

Last Updated 9 ಸೆಪ್ಟೆಂಬರ್ 2019, 14:45 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದ್ದು, ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸಲು ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಸದಸ್ಯತ್ವ ಅಭಿಯಾನದ ಮೂಲಕ ಪ್ರತಿ ಬೂತ್‌ಗೆ ಕನಿಷ್ಠ ಇಬ್ಬರು ಸಕ್ರಿಯ ಸದಸ್ಯರನ್ನು ನೋಂದಾಯಿಸಿ ಪಕ್ಷ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

‘ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಠಗೊಂಡು ಜಯ ಗಳಿಸಬೇಕು. ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ ಕೈಗೊಂಡು ಪಕ್ಷದ ಬಲವರ್ಧನೆಗೆ ಒತ್ತು ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸದಸ್ಯತ್ವ ಹೆಚ್ಚಿಸಬೇಕು’ ಎಂದು ತಿಳಿಸಿದರು.

‘ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರಿಂದ ಜನರ ಒಲವು ಬಿಜೆಪಿ ಪರವಾಗಿದೆ. ಇದನ್ನು ಬಳಸಿಕೊಂಡು ಹೆಚ್ಚಿನ ಸದಸ್ಯತ್ವ ಮಾಡಿಸಿ ವರಿಷ್ಠರು ನೀಡಿರುವ ಗುರಿ ತಲುಪಬೇಕು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಕ್ತಿಮೀರಿ ಕೆಲಸ ಮಾಡಿ ಗುರಿ ಸಾಧಿಸಬೇಕು’ ಎಂದು ಹೇಳಿದರು.

ಸೇವಾ ಕಾರ್ಯ: ‘ಮೋದಿ ಜನ್ಮ ದಿನದ ಅಂಗವಾಗಿ ಸೆ.17ರಂದು ಪಕ್ಷದಿಂದ ಸೇವಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಅದೇ ರೀತಿ ಸೆ.25ರಂದು ಬಿಜೆಪಿ ಸಂಸ್ಥಾಪಕ ಪಂಡಿತ್ ದೀನ ದಯಾಳ್‌ರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ವಿವರಿಸಿದರು.

‘ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 50 ಸಾವಿರ ಸದಸ್ಯರ ನೋಂದಣಿ ಮಾಡಿಸಲು ಶ್ರಮಿಸುತ್ತೇವೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ವಾಸುದೇವ್, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT