ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 2ಕ್ಕೆ ಲಂಡನ್‌ನಲ್ಲಿ ಕುರುಬರ ಸಮಾವೇಶ

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿಶ್ವನಾಥ್‌ ಹೇಳಿಕೆ
Last Updated 8 ಮಾರ್ಚ್ 2020, 13:22 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದಲ್ಲಿ ಕುರುಬ ಸಮುದಾಯದವರು ಹರಿದು ಹಂಚಿ ಹೋಗಿರುವುದರಿಂದ ಸಮಸ್ಯೆ ಎದುರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆಯ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿ, ‘ಕುರುಬ ಸಮುದಾಯ ಸಂಘಟಿಸುವ ಉದ್ದೇಶಕ್ಕೆ ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಘಟನೆ ರಚನೆ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ’ ಎಂದರು.

‘ದೇಶದಲ್ಲಿ ಕುರುಬ ಸಮುದಾಯದ ಜನಸಂಖ್ಯೆ ಸುಮಾರು 12 ಕೋಟಿಯಿದೆ. ಕುರಿ ಸಾಕಾಣಿಕೆಯು ಸಮುದಾಯದ ಕುಲ ಕಸುಬು. ಮನುಷ್ಯ ಜನಿಸಿದ ದಿನದಂದೇ ಕುರುಬ ಸಮುದಾಯ ಜನ್ಮ ತಾಳಿದೆ. ಸಮಾಜದಲ್ಲಿ ಕುರುಬ ಸಮುದಾಯವರು ಬೇರೆ ಬೇರೆ ಹೆಸರಿನಲ್ಲಿ ಸಂಘಟಿತರಾಗುತ್ತಿದ್ದು, ಅವರೆಲ್ಲರನ್ನೂ ಒಗ್ಗೂಡಿಸಿ ಅಖಿಲ ಭಾರತ ಮಟ್ಟದಲ್ಲಿ ಸಂಘಟನೆ ರಚನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಜಾಗತಿಕವಾಗಿ ಸಮುದಾಯದವರು ಸಂಘಟಿತರಾಗಬೇಕೆಂಬ ಉದ್ದೇಶಕ್ಕೆ ಲಂಡನ್‌ನಲ್ಲಿ ಮೇ 2ರಂದು ಕುರುಬರ ಸಮಾವೇಶ ಆಯೋಜಿಸಲಾಗಿದೆ. ಸಮುದಾಯವನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ಶೆಫರ್ಡ್‌ ಸಂಘಟನೆ ಶ್ರಮಿಸುತ್ತಿದೆ’ ಎಂದು ವಿವರಿಸಿದರು.

ಜನಪರ ಕೆಲಸ

‘ಶೆಫರ್ಡ್‌ ಸಂಘಟನೆಯು ಸಮುದಾಯದ ಬೇರೆ ಸಂಘಗಳಿಗೆ ವಿರುದ್ಧವಾಗಿರದೆ ಜನಪರ ಕೆಲಸ ಮಾಡುತ್ತದೆ. ಯಾವುದೇ ಸಮುದಾಯ ಸರ್ಕಾರದ ಸವಲತ್ತು ಪಡೆಯಲು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಹಕ್ಕು ಮತ್ತು ಸೌಕರ್ಯ ಪಡೆಯಲು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದರು.

‘ಸಮುದಾಯದಲ್ಲಿ ಒಗ್ಗಟ್ಟಿದ್ದರೆ ಮಾತ್ರ ಎಂತಹ ಸಂದರ್ಭದಲ್ಲಾದರೂ ಸೌಕರ್ಯ ಪಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಬಹುದು. ಅಧಿಕಾರ ನಡೆಸುವವರ ಕಿವಿ ಹಿಂಡಲು ಗುಂಪುಗಾರಿಕೆ ಬಿಟ್ಟು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು. ಗ್ರಾಮ ಮಟ್ಟದಿಂದ ಸಮುದಾಯ ಸಂಘಟಿಸುವ ಕೆಲಸ ಆಗಬೇಕು’ ಎಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಸಲಹೆ ನೀಡಿದರು.

ಧ್ವನಿ ಎತ್ತಬೇಕು

‘ಶೆಫರ್ಡ್ ಸಂಘಟನೆಯು ಗ್ರಾಮಗಳಿಂದ ಸಮುದಾಯವರಿಗೆ ಅರಿವು ಮೂಡಿಸಿ ರಾಷ್ಟ್ರ ಮಟ್ಟದವರೆಗೂ ಸಂಘಟಿತವಾಗಿ ರಾಜಕೀಯ ಪಕ್ಷಗಳು ತಿರುಗಿ ನೋಡುವಂತಹ ಸನ್ನಿವೇಶ ಸೃಷ್ಟಿಸಬೇಕು. ಕುರುಬ ಸಮುದಾಯಕ್ಕೆ ಸರ್ಕಾರದ ಸೌಕರ್ಯ ಮತ್ತು ಸಹಕಾರ ಪಡೆಯಲು ದೇಶವ್ಯಾಪಿ ಧ್ವನಿ ಎತ್ತಬೇಕು’ ಎಂದು ಮಾಜಿ ಸಚಿವ ಆರ್.ಶಂಕರ್ ಅಭಿಪ್ರಾಯಪಟ್ಟರು.

ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ಸೋಮಣ್ಣ, ಅಪ್ಪಯ್ಯಗೌಡ, ನಗರಸಭೆ ಸದಸ್ಯರಾದ ಮಂಜುನಾಥ್, ಪ್ರಸಾದ್‌ಬಾಬು, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸೋಮಶೇಖರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT